ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸಭೆ ನಡೆಸಿದರು.
ಕಾರವಾರ:ಜಿಲ್ಲೆಯಲ್ಲಿ ಸರಕು ಸಾಗಣಿಕೆ ವಾಹನಗಳಲ್ಲಿ ಸರಕು ಮತ್ತು ಸಾಮಗ್ರಿಗಳ ಓವರ್ ಲೋಡ್ ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸುವಂತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೇಗಳನ್ನು ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ದಿಷ್ಟ ಒಂದು ರಸ್ತೆಯಲ್ಲಿ ಮಾತ್ರ ತಪಾಸಣೆಗಳನ್ನು ಕೈಗೊಳ್ಳದೇ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಂಡು ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸಬೇಕು. ಖಾಸಗಿ ಸಾರಿಗೆ ಬಸ್ ಗಳ ಡಿಕ್ಕಿಯಲ್ಲಿ ಪ್ರಯಾಣಿಕರ ಲಗೇಜ್ ಹೊರತುಪಡಿಸಿ ಇತರ ಸಾಮಗ್ರಿಗಳನ್ನು ಸಾಗಿಸುವುದರ ಬಗ್ಗೆ ವ್ಯಾಪಕ ತಪಾಸಣೆಗಳನ್ನು ನಡೆಸುವಂತೆ ಮತ್ತು ದೂರದ ಸ್ಥಳಗಳಿಗೆ ಪ್ರಯಾಣಿಸುವ ಬಸ್ ಗಳಲ್ಲಿ ಇಬ್ಬರು ಚಾಲಕರು ಇರುವ ಬಗ್ಗೆ ತಪಾಸಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರವಾರದ ಫ್ಲೈ ಓವರ್ ಕೆಳಗೆ ಅಂಗಡಿಗಳು ಮತ್ತು ಜನವಸತಿ ಕಂಡುಬರುತ್ತಿದ್ದು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಎನ್,ಹೆಚ್.ಐ. ಮಾರ್ಗಸೂಚಿಯಂತೆ ಫ್ಲೈ ಓವರ್ ಕಳಭಾಗದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಶೀಘ್ರದಲ್ಲಿ ಮಾಡುವಂತೆ ತಿಳಿಸಿದರು.
ಇತೀಚೆಗೆ ಕುಮಟಾದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು ಅಗತ್ಯವಿರುವಡೆಗಳಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು,
ರಸ್ತೆಗಳಿಗೆ ಲೈನ್ ಮಾರ್ಕ್ ಮತ್ತು ಕ್ಯಾಟ್ ಐ ಗಳನ್ನು ಅಳವಡಿಸಬೇಕು. ಹೆದ್ದಾರಿಯ ಪಕ್ಕದಲ್ಲಿ ಗುಡ್ಡಗಳಿಂದ ಜಲಪಾತದ ರೀತಿಯಲ್ಲಿ ನೀರು ಬೀಳುವ ಪ್ರದೇಶದಲ್ಲಿ ಸಾರ್ವಜನಿಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದು ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುವುದರಿಂದ ಇಂತಹ ಪ್ರದೇಶದಲ್ಲಿ ನೋ ಪಾರ್ಕಿಂಗ್ ಸೇರಿದಂತೆ ಇತರೇ ಅಗತ್ಯ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಘಟ್ಟ ಪ್ರದೇಶದಿಂದ ಆಗಮಿಸುವ ವಾಹನಗಳ ಚಾಲಕರಿಗೆ ಮುಂದೆ ಎಷ್ಟು ತಿರುವುಗಳು ಇವೆ ಎಂಬ ಬಗ್ಗೆ ಮಾಹಿತಿ
ಇಲ್ಲದ ಕಾರಣ ವೇಗವಾಗಿ ವಾಹನ ಚಲಾಯಿಸಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ನಿಯಂತ್ರಿಸಲು ಇಳಿಜಾರು ಪ್ರದೇಶ ಆರಂಭವಾಗುವ ಸ್ಥಳದಿಂದಲೇ ಮುಂದೆ ಎಷ್ಟನೇ ತಿರುವು ಇದೆ ಎಂಬ ಸಂಖ್ಯೆಗಳ ಮಾಹಿತಿಯನ್ನು ಒಳಗೊಂಡ ಸೂಚನಾ ಫಲಕಗಳನ್ನು ಅಳವಡಿಸುವಂತೆ ಮತ್ತು ಎಲ್ಲಾ ಸೇತುವೆಗಳ ಬಗ್ಗೆ ಸೂಚನಾ ಫಲಕ ಮತ್ತು ರಾತ್ರಿ ವೇಳೆ ಸೇತುವೆ ಸ್ಪಷ್ಟವಾಗಿ ಗೋಚರವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪೊಲೀಸ್ ಇಲಾಖೆಯ ಸೂಚನೆಯಂತೆ ಅಗತ್ಯವಿರುವೆಡೆಗಳಲ್ಲಿ ಎ.ಎನ್.ಪಿ.ಆರ್ ಕೆಮರಗಳನ್ನು ಅಳವಡಿಸಬೇಕು, ಬ್ಲಾಕ್
ಸ್ಪಾಟ್ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ವೇಗಮಿತಿ ಸೂಚನಾ ಫಲಕಗಳು ಮತ್ತು ಬ್ಲಿಂರ‍್ಸ್ ಗಳನ್ನು
ಅಳವಡಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಧಿಕಾರಿ ಶ್ರವಣಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.