ನಾಗರಾಜ ನಾಯಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉತ್ತರ ಕನ್ನಡ

ಹೈಕೋರ್ಟ್‌ ಮಂಗಳೂರು ಪೀಠಕ್ಕೆ ಉಕ ಸೇರ್ಪಡೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕನ್ನಡ ವಕೀಲರ ಸಂಘದಿಂದ ಆ 13 ರಂದು ಬೃಹತ್‌ ಪ್ರತಿಭಟನೆಗೆ ನಿರ್ಧಾರ
  • ವಕೀಲ ನಾಗರಾಜ ನಾಯಕ ಹೇಳಿಕೆ
ಕಾರವಾರ: 

ಮಂಗಳೂರಿನಲ್ಲಿ ಪ್ರಾರಂಭಿಸಲು ಪ್ರಸ್ತಾವಿಸಿರುವ ರಾಜ್ಯ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವುದನ್ನು ವಿರೋಽಸಿ ಆಗಸ್ಟ್ 13 ರಂದು ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕಾರವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಮಿತ್ರ ಸಮಾಜದಿಂದ ಪಾದಯಾತ್ರೆ ನಡೆಸಿ, ನಂತರ ಜಿಲ್ಲಾಽಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಲಾಗುವುದು ಎಂದರು. 
ಪ್ರಸ್ತುತ ಉತ್ತರ ಕನ್ನಡವು ಧಾರವಾಡ ಉಚ್ಛ ನ್ಯಾಯಾಲಯದ ಪೀಠದ ವ್ಯಾಪ್ತಿಯಲ್ಲಿದ್ದು, ಇಲ್ಲಿಯೇ ಮುಂದುವರಿಯಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸರ್ಕಾರದ ಈ ಪ್ರಸ್ತಾಪವು ಅವೈಜ್ಞಾನಿಕವಾಗಿದ್ದು, ಜಿಲ್ಲೆಯಾದ್ಯಂತ ನಡೆಸಿದ ಪೂರ್ವಭಾವಿ ಸಭೆಗಳಲ್ಲಿ ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರು ಪೀಠದ ಪ್ರಸ್ತಾಪದ ವಿರುದ್ಧ ಈಗಾಗಲೇ ರಾಜ್ಯಪಾಲರು ಮತ್ತು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಸಾವಿರಾರು ಪತ್ರಗಳನ್ನು ಕಳುಹಿಸುವ ಪತ್ರ ಚಳುವಳಿಯನ್ನು ಪ್ರಾರಂಭಿಸಿದ್ದೇವೆ. ಅದರ ಭಾಗವಾಗಿ ಇನ್ನೊಂದು ಹೋರಾಟ ನಡೆಸಲಿದ್ದೇವೆ ಎಂದರು. 
ಮಂಗಳೂರು ಪೀಠಕ್ಕೆ ಜಿಲ್ಲೆಯನ್ನು ಸೇರಿಸುವುದರಿಂದ ವಕೀಲರಿಗಿಂತ ಹೆಚ್ಚಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಕಾರವಾರದಿಂದ ಧಾರವಾಡಕ್ಕೆ ಕೇವಲ 170 ಕಿ.ಮೀ. ದೂರವಿದ್ದು, ಮೂರು ಗಂಟೆಗಳಲ್ಲಿ ತಲುಪಬಹುದು. ಆದರೆ ಮಂಗಳೂರಿಗೆ 270 ಕಿ.ಮೀ. ಪ್ರಯಾಣಿಸಬೇಕಾಗಿದ್ದು, ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಬೇಕಾಗುತ್ತದೆ. ವಿಶೇಷವಾಗಿ ಹಳಿಯಾಳ ತಾಲೂಕಿನ ಜನರಿಗೆ ಧಾರವಾಡ ಅತ್ಯಂತ ಸಮೀಪದಲ್ಲಿದ್ದು, ಅಲ್ಲಿಂದ ಮಂಗಳೂರಿಗೆ ಹೋಗಬೇಕೆಂದರೆ 7 ಗಂಟೆಗಳ ಸುದೀರ್ಘ ಪ್ರಯಾಣ ಅನಿವಾರ್ಯವಾಗುತ್ತದೆ. ಇದು ಬಡವರು, ವಯೋವೃದ್ಧರು ಹಾಗೂ ಮಹಿಳೆಯರ ಮೇಲೆ ಭಾರಿ ಹೊರೆಯಾಗಲಿದೆ ಎಂದು ನಾಗರಾಜ ನಾಯಕ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ವಕೀಲರ ಸಂಘದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್, ದೀಪಾ, ಸಂಜಯ ಸಾಳುಂಕೆ, ಚರಣ್ ಡಿ.ನಾಯ್ಕ, ಲಕ್ಷ್ಮೀ ರಾಣೆ ಹಾಗೂ ಸುಮಿತಾ ಭೂತೆ ಸುದ್ದಿಗೋಷ್ಠಿಯಲ್ಲಿದ್ದರು. 

ಉತ್ತರ ಕನ್ನಡದಲ್ಲೇ ಮಾಡಲಿ 

ಉತ್ತರ ಕನ್ನಡ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕಿಂತಲೂ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ರಾಜ್ಯದ ಶೇ.50 ರಷ್ಟು ಕರಾವಳಿಯನ್ನು ಹೊಂದಿದೆ. ಬಂದರು, ವಿಮಾನ ನಿಲ್ದಾಣ ಹಾಗೂ ಮೆಡಿಕಲ್ ಕಾಲೇಜುಗಳಂತಹ ಅಭಿವೃದ್ಧಿ ಯೋಜನೆಗಳನ್ನು ದಕ್ಷಿಣ ಕನ್ನಡಕ್ಕೆ ನೀಡುತ್ತಿರುವ ಸರ್ಕಾರ, ಅರಣ್ಯ ನಾಶ ಹಾಗೂ ಪರಿಸರ ಹಾನಿ ಉಂಟುಮಾಡುವ ಯೋಜನೆಗಳನ್ನು ಮಾತ್ರ ಉತ್ತರ ಕನ್ನಡದ ಮೇಲೆ ಹೇರುತ್ತಿದೆ. ಹಾಗಾಗಿ ಹೈಕೋರ್ಟ್ ಪೀಠ ಮಾಡುವುದಿದ್ದರೆ ಉತ್ತರ ಕನ್ನಡದಲ್ಲೇ ಮಾಡಲಿ ಎಂದು ನಾಗರಾಜ ನಾಯಕ ಒತ್ತಾಯಿಸಿದರು. 
..........