ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.  
ಉತ್ತರ ಕನ್ನಡ

ನವೆಂಬರ್‌ 2 ರಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂಧ್‌ ಸಾಧ್ಯತೆ

ಶಿರಾಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಪ್ರಕರಣ-ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಎಚ್ಚರಿಕೆ

ಕಾರವಾರ: ಭಟ್ಕಳ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸದೇ ಇದ್ದರೆ ನ.2 ರಿಂದ ಒಪಿಡಿ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಸಿದೆ.

ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಜಿಪಂ ಸಿಇಒ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ನಂತರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಎಚ್‌ಒ ಡಾ.ಸಂಜಯ ದೊಡ್ಮನಿ ಮಾತನಾಡಿ, ಅ.28 ರಂದು ಭಟ್ಕಳದಲ್ಲಿ ಘಟನೆ ನಡೆದಿದೆ. ಇದು ಸರ್ಕಾರಿ ಆಸ್ಪತ್ರೆಗಳ ವೈದ್ಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿ ನಾಲ್ಕು ದಿನವಾದರೂ ಆರೋಪಿಗಳನ್ನು ಬಂಧನ ಮಾಡದೇ ಇರುವುದು ಖಂಡನೀಯ. ನಮ್ಮ ಹೋರಾಟಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉತ್ತರ ಕನ್ನಡ ಘಟಕ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಬೆಂಬಲ ನೀಡಿದೆ ಎಂದರು.

ಶಿರಾಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶೃತಿ ಮಾತನಾಡಿ, ಸೆ.26 ರಂದು ಹೇಮಾ ಸಂದೇಶ ನಾಯ್ಕ ಎಂಬ ಮಹಿಳೆ ತಮ್ಮ ಎರಡನೇ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಹೆಣ್ಣು ಮಗುವಾಗಿದ್ದರಿಂದ ವೈದ್ಯರಲ್ಲಿ ಬೇಸರ ತೋಡಿಕೊಂಡಿದ್ದಳು. ಆಕೆ ಮಗುವಿಗೆ ಹಾಲುಣಿಸಲು ನಿರ್ಲಕ್ಷ್ಯ ವಹಿಸುತ್ತಿರುವುದು ಗಮನಕ್ಕೆ ಬಂದು ವೈದ್ಯರು ಅದನ್ನು ತಿಳಿಸಿಕೊಟ್ಟಿದ್ದಾರೆ. ಆದರೆ, ನ.28 ರಂದು ಮಗುವಿನ ಸಾವಾಗಿದೆ. ಈ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬರಲಿಕ್ಕಿದೆ. ಘಟನೆಯಲ್ಲಿ ವೈದ್ಯರ ಯಾವುದೇ ನಿರ್ಲಕ್ಷ್ಯವಾಗಿಲ್ಲ.

ಆದರೆ, ಅಷ್ಟರೊಳಗೇ ಮಹಿಳೆಯ ಕಡೆಯ ಹಲವರು ಆಗಮಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. 25 ಲಕ್ಷ ರೂ. ಪರಿಹಾರ ನೀಡುವಂತೆ ಕೇಳಿದರು ಎಂದು ಘಟನೆಯ ವಿವರ ನೀಡಿದರು.

ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷೆ ಡಾ.ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಹೆರಿಗೆ ತಜ್ಞರೇ ಇರಲಿಲ್ಲ. ಸಾಕಷ್ಟು ಮನವೊಲಿಸಿ ಹೆರಿಗೆ ತಜ್ಞರನ್ನು ಶಿರಾಲಿ ಆಸ್ಪತ್ರೆಗೆ ಕರೆತರಲಾಗಿತ್ತು.ಈ ಘಟನೆಯ ನಂತರ ಮೂವರು ಗುತ್ತಿಗೆ ವೈದ್ಯರು ರಾಜೀನಾಮೆ ನೀಡಿದ್ದಾರೆ. ಜಿಲ್ಲೆಗೆ ವೈದ್ಯರು ಬರಲೊಪ್ಪುವುದಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಘಟನೆಯಿಂದ ಇಡೀ ಭಟ್ಕಳ ತಾಲೂಕಿಗೆ ಒಬ್ಬರೂ ಹೆರಿಗೆ ತಜ್ಞರು ಇಲ್ಲದಂತಾಗಿದೆ ಎಂದರು.

ಆರ್‌ಸಿಎಚ್‌ಒ ಡಾ.ನಟರಾಜ್, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ.ನರೇಂದ್ರ ಪವಾರ್, ಜಿಲ್ಲಾ ಆಯುಷ್ ಅಧಿಕಾರಿ ಸಂಜೀವ ಕುಮಾರ್ ನಾಯ್ಕ ಇದ್ದರು.

.....