ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಆನ್‌ಲೈನ್‌ ಹೂಡಿಕೆ : 53 ಲಕ್ಷ ಕಳೆದುಕೊಂಡ ಅವರ್ಸಾದ ವ್ಯಕ್ತಿ

ಕಾರವಾರ: ಆನ್‌ಲೈನ್ ಮಾರ್ಕೆಟ್ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದ್ದು, ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ಅವರ್ಸಾದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನಂಬಿ ಲಿಂಕ್ ಕ್ಲಿಕ್ ಮಾಡಿ ಬಿಎಕ್ಸ್ಬಿ ಮಾರ್ಕೆಟ್ ಎಂಬ ಟ್ರೇಡಿಂಗ್ ಆ್ಯಪ್‌ನಲ್ಲಿ ಅದರಲ್ಲಿ ಮಾಹಿತಿಭರಣ ಮಾಡಿದ್ದರು. ಮೊದಲು 19 ಸಾವಿರ ರೂ. ಹೂಡಿಕೆ ಮಾಡಿದ್ದರು. ಆ್ಯಪ್‌ನಲ್ಲಿ ಮೊತ್ತ ಏರುತ್ತಿರುವುದು ಕಾಣುತ್ತಿತ್ತು. ನಂತರ ಕೆಲವು ವ್ಯಕ್ತಿಗಳು ಕರೆ ಮಾಡಿ, ಹೆಚ್ಚಿನ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಸಿಗುವುದಾಗಿ ನಂಬಿಸಿದ್ದರು. ಮತ್ತು ದಾಗ ಆ ಹಣ ಏರುತ್ತ ಹೋಗಿರುವುದು ಅದನ್ನು ನಂಬಿದ ವ್ಯಕ್ತಿ ಒಂದೇ ತಿಂಗಳಲ್ಲಿ 53.19 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆದರೆ ಲಾಭಾಂಶವಾಗಲಿ, ಹಣವಾಗಲಿ ಬಂದಿರಲಿಲ್ಲ. ಇದರಿಂದ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಸೈಬರ್‌ ವಂಚನೆಗಳು ಹೆಚ್ಚುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಕೋಟಿಗೂ ಹೆಚ್ಚು ಹಣವನ್ನು ಸೈಬರ್‌ ವಂಚಕರು ದೋಚಿದ್ದಾರೆ.
ಪೊಲೀಸರ ವೇಷ ಧರಿಸಿ, ವಿಡಿಯೋ ಕರೆ ಮಾಡಿ ಒಂಟಿ ಮಹಿಳೆಗೆ ವಂಚಿಸಿದ ಘಟನೆ ನಡೆದಿದ್ದು, ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡ ಬೆತ್‌ನಾಯ್ಕವಾಡದಲ್ಲಿ ವಾಸವಿರುವ ಒಂಟಿ ಮಹಿಳೆಗೆ ಕಳೆದ ಜ.23 ರಂದು ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ನಿಮ್ಮ ಹೆಸರಿಗೆ ಪಾರ್ಸಲ್ ಒಂದು ಬಂದಿದೆ. ಅದರಲ್ಲಿ ಮೊಬೈಲ್ ಐಫೋನ್ ಹಾಗೂ ಬಂಗಾರದ ಸರ ಇದೆ ಎಂದಿದ್ದ. ಆದರೆ, ಅವುಗಳು ನನ್ನದಲ್ಲ ಎಂದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಫೋನ್ ಬಳಸಿಕೊಂಡು ವಂಚನೆ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದ.
ಇತ್ತೀಚೆಗೆ ಮತ್ತೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮ್ಮ ಹೆಸರಿನಲ್ಲಿ 2 ಕೋಟಿ ರೂ. ವಂಚನೆ ನಡೆದಿದೆ. ತನಿಖೆ ನಡೆಯುತ್ತಿದೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ. ಹಾಗಾಗಿ ನಿಮ್ಮ ಬಳಿ ಇರುವ ಹಣವನ್ನು ಆರ್‌ಬಿಐಗೆ ಹಸ್ತಾಂತರಿಸಿ ಎಂದು ತಿಳಿಸಿದ್ದರು. ಗಾಬರಿಗೊಂಡ ಮಹಿಳೆ ವಂಚಕರು ಹೇಳಿದ ಖಾತೆಗೆ 9.94 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದರು. ನಂತರ ಅವರು ನಿಜವಾದ ಪೊಲೀಸರಲ್ಲ ವಂಚನೆಗೊಳಗಾಗಿದ್ದೇನೆ ಎಂದು ಗೊತ್ತಾಗಿ ಚಿತ್ತಾಕುಲಾ ಪೊಲೀಸರ ಮೊರೆ ಹೋಗಿದ್ದಾಳೆ.