ಭಟ್ಕಳ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಪರಿಶೀಲನೆ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸಿ ಮಹೇಶ ಜೆ., ಡಿವೈಎಸ್ಪಿ ಗಿರೀಶ, ತಹಸೀಲ್ದಾರ್ ಪ್ರವೀಣ ಕರಾಂಡೆ, ನಗರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ್ ಮಾನೆ, ಇಒ ಸುನೀಲ ಇತರರಿದ್ದರು. 
ಉತ್ತರ ಕನ್ನಡ

Officials criticized ದಲಿತ ಮುಖಂಡರಿಂದ ಅಧಿಕಾರಿಗಳು ತರಾಟೆಗೆ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ, ಎಸ್ಟಿ ಕುಂದುಕೊರತೆ ಪರಿಶೀಲನೆ ಸಭೆ
  • ವಿವಿಧ ಸಮಸ್ಯೆಗಳ ಸುರಿಮಳೆ, ಆಕ್ರೋಶ
ಭಟ್ಕಳ: ಪರಿಶಿಷ್ಟರ ಕೇರಿಗೆ ಹೋಗುವ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ, ಕುಮಟಾದ ಸರ್ಕಾರಿ ಪರಿಶಿಷ್ಟರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ, ಹಂದಿಗೋಣದಲ್ಲಿ ಸ್ಮಶಾನ ಜಾಗದ ವಿವಾದ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಪರಿಶೀಲನೆ ಸಭೆಯಲ್ಲಿ ದಲಿತ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದಲಿತ ಮುಖಂಡ ಕಿರಣ ಶಿರೂರು ಮಾತನಾಡಿ, ಪರಿಶಿಷ್ಟರ ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿದ್ದರೂ, ನ್ಯಾಯಾಲಯದ ಆದೇಶಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್.ಆರ್. ಮುಕ್ರಿ ಮಾತನಾಡಿ, ಹಂದಿಗೋಣದಲ್ಲಿ ಸ್ಮಶಾನಕ್ಕಾಗಿ ಗುರುತಿಸಿ ಅನುದಾನ ಮಂಜೂರಾಗಿದ್ದ ಜಾಗವನ್ನು ಬದಲಾಯಿಸಲು ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಮಾದೇವ ಬಾಕಡ್ ಮಾತನಾಡಿ, ಪರಿಶಿಷ್ಟ ಸಮುದಾಯದ ಅನೇಕ ಕುಟುಂಬಗಳಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ಸರ್ಕಾರಿ ಜಾಗಗಳ ಮಾಹಿತಿ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದರೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದರು. ವೆಂಕಟೇಶ ಹಳ್ಳೇರ, ಮಾರುತಿ ಕುಮಟಾ ಹಾಗೂ ಸತೀಶ ಚಂದಾವರ ಸಹ ಸಮುದಾಯದ ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಕುಮಟಾದ ಸರ್ಕಾರಿ ಪರಿಶಿಷ್ಟರ ವಿದ್ಯಾರ್ಥಿ ನಿಲಯದಲ್ಲಿ ಒಂದೇ ಹಾಲ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಮಲಗುವ ದುಸ್ಥಿತಿ ಇದೆ ಎಂದು ಮುಖಂಡ ಗೋವಿಂದ ಮುಕ್ತಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ, ವಿದ್ಯಾರ್ಥಿ ನಿಲಯವು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡ್ಮೂರು ತಿಂಗಳೊಳಗೆ ಶಾಶ್ವತ ಪರಿಹಾರ ಕಲ್ಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲೋಕೇಶ ಚಂದಾವರ ಹೊಸಹೆರವಟ್ಟಾ ಮಾತನಾಡಿ, ಕಳೆದ 48 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿದ್ದು ತೆರಿಗೆಯನ್ನೂ ಪಾವತಿಸುತ್ತಿದ್ದೇನೆ. ಇದೇ ಪ್ರದೇಶದ ಹಲವರಿಗೆ ಭೂಮಿ ಮಂಜೂರಾಗಿದ್ದರೂ ನನಗೆ ಮಾತ್ರ ಅತಿಕ್ರಮಣ ನೋಟಿಸ್ ನೀಡಲಾಗಿದೆ. ಎಲ್ಲ ದಾಖಲೆಗಳು ನನ್ನ ಬಳಿ ಇದ್ದರೂ ಈ ವಯಸ್ಸಿನಲ್ಲಿ ನ್ಯಾಯಾಲಯದ ಅಲೆದಾಟಕ್ಕೆ ತಳ್ಳಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಗೆ ನೆರವಾದ ಪರಿಶಿಷ್ಟ ಸಮುದಾಯದ ಬಾಲಕನನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸಿ ಮಹೇಶ ಜೆ. ಡಿವೈಎಸ್ಪಿ ಗಿರೀಶ, ತಹಸೀಲ್ದಾರ್ ಪ್ರವೀಣ ಕರಾಂಡೆ, ನಗರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ್ ಮಾನೆ, ತಾಪಂ ಇಒ ಸುನೀಲ, ಸಿಪಿಐ ದಿವಾಕರ, ಸಿಪಿಐ ವೆಂಕಟೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಹಾಗೂ ದಲಿತ ಮುಖಂಡರಾದ ತುಳಸಿದಾಸ ಪಾವಸ್ಕರ್, ರವೀಂದ್ರ ಮಂಗಳ, ಮಾರುತಿ ಪಾವಸ್ಕರ್ ಇತರರು ಉಪಸ್ಥಿತರಿದ್ದರು.