ಕುಖ್ಯಾತ (Notorious) ರೌಡಿಶೀಟರ್ ಮಚ್ಚ ಮಂಜ್ಯಾ 
ಉತ್ತರ ಕನ್ನಡ

ಕುಖ್ಯಾತ ರೌಡಿಶೀಟರ್ ಮಚ್ಚ ಮಂಜ್ಯಾ ಅಂದರ್ Notorious

ಪ್ರಮುಖ ಮುಖ್ಯಾಂಶಗಳು

  • ಹಳಿಯಾಳ ಠಾಣೆ ಪೊಲೀಸರ ಕಾರ್ಯಾಚರಣೆ
  • ನ್ಯಾಯಾಂಗ ಬಂಧನ
  • ದಾದಾಗಿರಿಯ ವಿಡಿಯೋಗಳು ರಾಜ್ಯಾದ್ಯಂತ ವೈರಲ್
ಹಳಿಯಾಳ: ಪೊಲೀಸರ ನಿದ್ದೆಗೆಡಿಸಿದ್ದ ಕುಖ್ಯಾತ (Notorious) ರೌಡಿಶೀಟರ್ ಮಂಜುನಾಥ ಅಲಿಯಾಸ್ ಮಚ್ಚ ಮಂಜಾ ಎಂಬಾತನನ್ನು ಮಹಾರಾಷ್ಟ್ರದ ಸಾಂಗ್ಲಿ ಬಳಿ ಭಾನುವಾರ ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೇ ಪಟ್ಟಣದ ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡಿ, ಕರ್ತವ್ಯಕ್ಕೆ ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಮಂಜಾನ ದಾದಾಗಿರಿಯ ವಿಡಿಯೋಗಳು ರಾಜ್ಯಾದ್ಯಂತ ವೈರಲ್ ಆಗಿದ್ದವು.
ಸ್ಥಳಕ್ಕೆ ಬಂದಿದ್ದ ಪಿಎಸ್‌ಐ ಬಸವರಾಜ ಮಬನೂರು ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿತ್ತು. ಪರಿಣಾಮ ಪಿಎಸ್‌ಐ ಬಸವರಾಜ ಮಬನೂರು ಅಮಾನತುಗೊಂಡಿದ್ದರು ಮತ್ತು 8 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು.
ಆದರೆ, ನಿಜವಾದ ಸವಾಲು ಎದುರಾಗಿದ್ದು ಬಳಿಕ. ಯಾವುದೇ ಮೊಬೈಲ್ ಬಳಸದ, ಡಿಜಿಟಲ್ ಸುಳಿವು ಸಿಗದ ಮಂಜಾನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಗ್ಗಂಟಾಗಿತ್ತು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಲೊಕೇಶನ್ ಇಲ್ಲದೆ, ಆರೋಪಿಯನ್ನು ಹಿಡಿಯುವುದು ಸೂಜಿಯನ್ನು ಬಣವೆಯಲ್ಲಿ ಹುಡುಕಿದಂತೆ. ಆದರೂ ಛಲ ಬಿಡದ ಖಾಕಿ ಪಡೆ, ಹಳೆಯ ಶೈಲಿಯ ಖಚಿತ ಮಾಹಿತಿ ಜಾಲ, ಮಾನವ ಬೇಹುಗಾರಿಕೆ ಮತ್ತು ಕ್ಷೇತ್ರಮಟ್ಟದ ಕಾರ್ಯಾಚರಣೆಗಿಳಿದು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ ನೇತೃತ್ವದಲ್ಲಿ ಹಳಿಯಾಳ ಮತ್ತು ದಾಂಡೇಲಿ ಪಿಎಸ್‌ಐಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ ನಾಯ್ಕ್, ಕಿರಣ ಪಾಟೀಲ ಮತ್ತು ಹಳಿಯಾಳ, ದಾಂಡೇಲಿ, ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಎಂ. ಮುಲ್ಲಾ, ಕೃಷ್ಣ, ಚಂದ್ರು, ಬಸವರಾಜ ತೇಲಸಂಗ, ನಿಂಗಪ್ಪ ಬಳ್ಳಾರಿ, ಬಸವರಾಜ ತ್ಯಾಪಿ, ಮಂಜುನಾಥ ಬಾಲಿ, ಬಸವರಾಜ ಹಗರಿ ಕಾರ್ಯಾಚರಣೆಯಲ್ಲಿದ್ದರು.
ಆರೋಪಿಯನ್ನು ಮಂಜಾನನ್ನು ಹಳಿಯಾಳಕ್ಕೆ ಕರೆತಂದು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.