ಕುಮಟಾ ತಾಲೂಕಿನ ಮಿರ್ಜಾನ ಕೋಟೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಟ್ಯಾಕ್ಸಿ ಚಾಲಕ-ಮಾಲೀಕರು ತಾಪಂ ಇಒ ರಾಜೇಂದ್ರ ಭಟ್ಟಗೆ ಮನವಿ ಸಲ್ಲಿಸಿದರು (Toll). ಭಾಸ್ಕರ ಪಟಗಾರ, ರಾಜು ಮಾಸ್ತಿಹಳ್ಳ, ಅನಂತ ಗೌಡ, ನವೀನ ನಾಯ್ಕ ಇತರರು ಇದ್ದರು.
ಕುಮಟಾ: ತಾಲೂಕಿನ ಮಿರ್ಜಾನ ಕೋಟೆಗೆ ಆಗಮಿಸುವ ಕೆಎ 30 ಮತ್ತು ಕೆಎ 47 ಆರ್‌ಟಿಒ ನೋಂದಣಿಯ ವಾಹನಗಳಿಂದ ಸುಂಕ (Toll) ವಸೂಲಿ ಮಾಡಬಾರದು ಎಂದು ಆಗ್ರಹಿಸಿ ಕರಾವಳಿ ಕನ್ನಡ ಸಂಘ, ಜಿಲ್ಲೆಯ ವಿವಿಧ ಟ್ಯಾಕ್ಸಿ ಸಂಘಟನೆಯ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೋಟೆ ರಸ್ತೆಯಲ್ಲಿ ಮಿರ್ಜಾನ ಗ್ರಾಮ ಪಂಚಾಯಿತಿಯಿಂದ ಇತ್ತೀಚೆಗೆ ಆರಂಭವಾಗಿರುವ ವಾಹನಗಳಿಗೆ ಸುಂಕ ವಸೂಲಿಯಿಂದ ಈ ಭಾಗದ ಟ್ಯಾಕ್ಸಿ ಚಾಲಕ-ಮಾಲೀಕರಿಗೆ ದೊಡ್ಡ ಹೊರೆಯಾಗಿದೆ.
ಕಳೆದ ಎರಡು ತಿಂಗಳಿಂದ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕರಾವಳಿ ಕನ್ನಡ ಸಂಘ ಹಾಗೂ ಕೆಲ ಟ್ಯಾಕ್ಸಿ ಸಂಘಟನೆಗಳ ಸಹಯೋಗದಲ್ಲಿ ಮಿರ್ಜಾನ ಕೋಟೆ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಕೂಡಲೇ ಸುಂಕ ವಸೂಲಿ ನಿಲ್ಲಿಸಲು ಆಗ್ರಹಿಸಿದರು. ಈ ಕುರಿತು ಇಒ ರಾಜೇಂದ್ರ ಭಟ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ ದೂರವಾಣಿ ಮೂಲಕ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮಾಹಿತಿ ನೀಡಿದರು.
ಸಚಿವರು ಸ್ಥಳದಲ್ಲಿದ್ದ ಇಒ ರಾಜೇಂದ್ರ ಭಟ್ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರೊಂದಿಗೆ ಮಾತನಾಡಿ, ಮಿರ್ಜಾನ ಕೋಟೆಗೆ ಆಗಮಿಸುವ ಕೆಎ 30 ಹಾಗೂ ಕೆಎ 47 ನೋಂದಣಿ ವಾಹನಗಳಿಗೆ ಸುಂಕ ವಸೂಲಿ ಮಾಡದಂತೆ ಮೌಖಿಕವಾಗಿ ಆದೇಶಿಸಿದರು.
ಇದರಿಂದ ಪ್ರತಿಭಟನಾಕಾರರು ಸಮಾಧಾನಗೊಂಡು ಪ್ರತಿಭಟನೆ ಕೈಬಿಟ್ಟರು.
ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ರಘು ನಾಯ್ಕ ಕಾರವಾರ, ಗಜಾನನ ನಾಯಕ ಅಂಕೋಲಾ, ಗಣಪತಿ ಗೌಡ ಮಾದನಗೇರಿ, ಗಣೇಶ ದೇವಾಡಿಗ ಭಟ್ಕಳ, ಅನಂತ ಗೌಡ ಗೋಕರ್ಣ, ನವೀನ ನಾಯ್ಕ ಕುಮಟಾ, ರಂಜನ್ ದೇವಾಡಿಗ ಮುರ್ಡೇಶ್ವರ ಇನ್ನಿತರರು ಇದ್ದರು.
ಮಿರ್ಜಾನ ಕೋಟೆ ರಸ್ತೆಯಲ್ಲಿ ವಾಹನಗಳಿಂದ ಸುಂಕ ವಸೂಲಿ ಬಗ್ಗೆ ಅಲ್ಲಿನ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಆಡಳಿತ ಮಂಡಳಿ ನಿರ್ಣಯ ಕೈಗೊಂಡು ಜಾರಿಗೆ ತಂದಿದೆ. ಅದನ್ನು ತಡೆಯುವ ಅಧಿಕಾರ ನಮಗಿಲ್ಲ. ಆದರೆ ಈ ಕುರಿತು ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ದೂರವಾಣಿಯಲ್ಲಿ ನಮ್ಮೊಂದಿಗೆ ಮಾತನಾಡಿದರು. ತಕ್ಷಣದಿಂದಲೇ ಮಿರ್ಜಾನ ಕೋಟೆಗೆ ಆಗಮಿಸುವ ಕೆಎ30 ಹಾಗೂ ಕೆಎ47 ನೋಂದಣಿ ವಾಹನಗಳಿಗೆ ಸುಂಕ ವಸೂಲಿ ಮಾಡದಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯಿತಿ ಪಿಡಿಒ ಹಾಗೂ ಸುಂಕ ವಸೂಲಿ ಜವಾಬ್ದಾರಿ ಪಡೆದಿರುವ ಎನ್‌ಜಿಒದವರಿಗೂ ಸಚಿವರ ಸೂಚನೆಯ ಕುರಿತು ಮಾರ್ಗದರ್ಶನ ನೀಡಿದ್ದೇವೆ.