ಶಿರಸಿಯ ನಿಸರ್ಗಮನೆಯಲ್ಲಿ ರಾಮಚಂದ್ರ ಹುದ್ದಾರ ಯೂಟ್ಯೂಬ್ ಚಾನಲ್ ಉದ್ಘಾಟಿಸಿದರು. ವಕೀಲ ಎಂ.ಎಸ್. ಭಾಗ್ವತ್, ಶಾಸಕಿ ಅನ್ನಪೂರ್ಣಾ ತುಕಾರಾಮ, ಡಾ. ವೆಂಕಟರಮಣ ಹೆಗಡೆ ಇತರರಿದ್ದರು.
- ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಮೆಚ್ಚುಗೆ
- ಯೂಟ್ಯೂಬ್ ಚಾನಲ್‌ನ ಗೋಲ್ಡನ್ ಬಟನ್ ಅನಾವರಣ
ಶಿರಸಿ: ಜನರ ಆರೋಗ್ಯ ಸಂರಕ್ಷಣೆಯ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ನಿಸರ್ಗಮನೆ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಹೇಳಿದರು.
ನಗರದ ಹೊರವಲಯದಲ್ಲಿರುವ ನಿಸರ್ಗಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಸರ್ಗಮನೆ ಯೂಟ್ಯೂಬ್ ಚಾನಲ್‌ನ ಗೋಲ್ಡನ್ ಬಟನ್ ಅನಾವರಣಗೊಳಿಸಿ ಅವರು ಮಾತನಾಡಿದರು.
ಯಾವುದೇ ಸಂಸ್ಥೆ ಬೆಳೆಯಲು ಎಲ್ಲರ ಸಹಭಾಗಿತ್ವ ಅಗತ್ಯವಾಗಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಕುಟುಂಬದವರ ಸಮನ್ವಯದ ಶ್ರಮವೇ ನಿಸರ್ಗಮನೆಯ ಇಂದಿನ ಸಾಧನೆಗೆ ಕಾರಣವಾಗಿದೆ ಎಂದರು.
ಆರೋಗ್ಯ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ಶಾಸಕಿ ಅನ್ನಪೂರ್ಣಾ ತುಕಾರಾಮ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗುತ್ತಿದ್ದು, ನಿಸರ್ಗ ಚಿಕಿತ್ಸೆ ಮೂಲಕ ಡಾ. ವೆಂಕಟರಮಣ ಹೆಗಡೆ ಜನರಿಗೆ ಸಮಾಧಾನಕರ ಪರಿಹಾರ ನೀಡುತ್ತಿದ್ದಾರೆ ಎಂದರು. ನಿಸರ್ಗಮನೆಯಲ್ಲಿ ರೋಗಿಗಳನ್ನು ಮನೆಯ ಸದಸ್ಯರಂತೆ ಕಾಣುವ ಸೇವಾಭಾವ ಇಡೀ ತಂಡದ ವಿಶೇಷತೆಯಾಗಿದೆ ಎಂದರು.
ಹೈಕೋರ್ಟ್ ಹಿರಿಯ ವಕೀಲ ಎಂ.ಎಸ್. ಭಾಗ್ವತ್ ಮಾತನಾಡಿ, ಬಾಡಿಗೆ ಕಟ್ಟಡದಿಂದ ಆರಂಭವಾದ ನಿಸರ್ಗಮನೆ ಇಂದು ಸಾವಿರಾರು ಜನರಿಗೆ ಆರೋಗ್ಯದ ಆಶಾಕಿರಣವಾಗಿದೆ. ಹಳ್ಳಿಯಿಂದ ಬೆಳೆದು ಹಳ್ಳಿಯಲ್ಲೇ ಸಾಧನೆ ಮಾಡುತ್ತಿರುವ ಡಾ. ಹೆಗಡೆ ಅವರ ಸಾಧನೆಯ ಹಾದಿ ಪ್ರೇರಣಾದಾಯಕವಾಗಿದೆ ಎಂದರು.
ಹೈಕೋರ್ಟ್ ಹಿರಿಯ ವಕೀಲ ರಮೇಶ್, ನಿಸರ್ಗಮನೆಯ ಪ್ರಮುಖರಾದ ನಾರಾಯಣ ಹೆಗಡೆ, ಭವಾನಿ ಹೆಗಡೆ, ಸಂಗೀತಾ ಹೆಗಡೆ ಉಪಸ್ಥಿತರಿದ್ದರು. ನಿಸರ್ಗಮನೆ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಡಾ. ಸುಶ್ರಾವ್ಯ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಲು ಶ್ರಮಿಸಿದ ವೈದ್ಯರು, ತಾಂತ್ರಿಕ ಸಹಾಯಕರು ಹಾಗೂ ತೆರೆಯ ಹಿಂದಿನ ಕಾರ್ಯಕರ್ತರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಿಸರ್ಗಮನೆ ಯುಟ್ಯೂಬ್ ಚಾನಲ್ ಆರೋಗ್ಯ ಜಾಗೃತಿ ಮೂಡಿಸುತ್ತ ಹತ್ತು ವರ್ಷಗಳಿಂದ ನಿರಂತರವಾಗಿ ತಂತ್ರಜ್ಞಾನ ಮೂಲಕ ಸೇವೆ ನೀಡುತ್ತಿದೆ. 10 ಲಕ್ಷ ಜನ ಚಂದಾದಾರರ ಜೊತೆಗೆ 2 ಕೋಟಿ ಜನರನ್ನು ತಲುಪಿದೆ. ದೈಹಿಕ, ಮಾನಸಿಕ ಆರೋಗ್ಯ ಜಾಗೃತಿಯೇ ಈ ಯುಟ್ಯೂಬ್‌ನ ಮುಖ್ಯ ಆಶಯ. ಈಗ ಗೋಲ್ಡನ್ ಪ್ಲೇ ಬಟನ್ ಅವಾರ್ಡ್ ಬಂದಿದ್ದು ಖುಷಿಯಾಗಿದೆ.
— ಡಾ. ವೆಂಕಟರಮಣ ಹೆಗಡೆ, ನಿಸರ್ಗಮನೆ ಸ್ಥಾಪಕರು