ಜಿಲ್ಲೆಯ ಕಾಂಗ್ರೆಸ್‌ ಶಾಸಕರು  
ಉತ್ತರ ಕನ್ನಡ

ಡಿಕೆಶಿ ಸಂಪುಟದಲ್ಲಿ ಜಿಲ್ಲೆಯ ಸಚಿವರು ಯಾರು ಚರ್ಚೆ ಜೋರು

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಭಡ್ತಿ ಪಡೆಯುವ ಸಿದ್ಧತೆ ನಡೆಸಿದ್ದಾರೆ. ಇಡೀ ಮಂತ್ರಿ ಮಂಡಲ ಮರು ರಚನೆಯಾಗಲಿದೆ. ರಾಜ್ಯ ರಾಜಕಾರಣದ ಈ ದೊಡ್ಡ ಬದಲಾವಣೆಯ ನಂತರ ಜಿಲ್ಲೆಯಲ್ಲಿ ಏನು ವ್ಯತ್ಯಾಸ ಆಗಲಿದೆ ಎಂಬ ಕುತೂಹಲ ಮೂಡಿದೆ.
ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಬಿಟ್ಟು ಮೂರು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಮಂಕಾಳ ವೈದ್ಯ ಸ್ಥಾನವೇ ಘಟ್ಟಿಯಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರ್.ವಿ.ದೇಶಪಾಂಡೆ ಇಡೀ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಹಿರಿಯ ಶಾಸಕರು. ಆದರೆ, ಕಳೆದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅವರು ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಈಗ ವಿಧಾನಸಭೆ ಸ್ಪೀಕರ್ ಹುದ್ದೆಯನ್ನಲಂಕರಿಸಲು ತಾನು ಸಿದ್ಧನಿಲ್ಲ ಎಂದು ಅವರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ. ಆದರೆ, ಹುದ್ದೆ ಸಿಕ್ಕರೆ ಅದನ್ನು ನಿಭಾಯಿಸುತ್ತೇನೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆದರೆ, ದೇಶಪಾಂಡೆ ಸಿದ್ದರಾಮಯ್ಯ ಅವರ ಆಪ್ತರು. ಡಿ.ಕೆ.ಶಿವಕುಮಾರ್ ಹಾಗೂ ದೇಶಪಾಂಡೆ ಅವರ ಸಂಬAಧ ಅಷ್ಟಕ್ಕಷ್ಟೇ ಇದೆ. ತಮಗಿಂತ ಕಿರಿಯರಾಗಿರುವ ಡಿ.ಕೆ.ಶಿ. ಅವರ ಕೆಳಗೆ ಕೆಲಸ ಮಾಡಲು ದೇಶಪಾಂಡೆ ಅವರು ಒಪು÷್ಪವ ಸಾಧ್ಯತೆಗಳು ಕಡಿಮೆ ಇವೆ ಎನ್ನಲಾಗಿದೆ.
ಕಾರವಾರ ಶಾಸಕ ಸತೀಶ ಸೈಲ್ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದಾರೆ. ಆದರೆ, ಅವರಿಗೆ ಅಕ್ರಮ ಗಣಿ ಹಾಗೂ ಇಡೀ ಪ್ರಕರಣಗಳು ಸಚಿವ ಸ್ಥಾನಕ್ಕೇರಲು ಅಡಚಣೆಯಾಗಲಿವೆ ಎಂಬ ಮಾತುಗಳು ಕೇಳಿ ಬರುತ್ತವೆ. ಸತೀಶ ಸೈಲ್ ಅನಾರೋಗ್ಯದ ಕಾರಣ ನೀಡಿ ಇಡಿ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇನ್ನು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಪ್ರತಿನಿಽಗಳ ವಿಶೇಷ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದ್ದರೂ ಅವರು ವಿಧಾನ ಸಭೆ ಅಽವೇಶದಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರಿಗೆ ಸಚಿವ ಸ್ಥಾನ ದುರ್ಲಭವಾಗಿದೆ.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮೊದಲ ಬಾರಿ ಶಾಸಕರಾದವರಾಗಿದ್ದಾರೆ. ನಾಮಧಾರಿ ಕೋಟಾದಡಿ ಅವರಿಗೆ ಸಚಿವ ಸ್ಥಾನ ನೀಡಬಹುದಾಗಿತ್ತು. ಆದರೆ, ಅವರದ್ದೇ ಅಳಿಯ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಾಮಧಾರಿ ಕೋಟಾದಲ್ಲಿ ಸಚಿವರಾಗಲು ಕಾದಿದ್ದಾರೆ. ಇದರಿಂದ ಭೀಮಣ್ಣರಿಗೆ ಅವಕಾಶ ಸಿಗು ಸಾಧ್ಯತೆ ತೀರ ಕಡಿಮೆಯಾಗಿದೆ.
ಮೀನುಗಾರರ ಕೋಟಾದಲ್ಲಿ ರಾಜ್ಯದಲ್ಲಿ ಬೇರೆ ಯಾವುದೇ ಶಾಸಕರು ಇಲ್ಲದ ಕಾರಣ ಹಾಗೂ ಶಿವಕುಮಾರ್ ಅವರ ಆಪ್ತರೂ ಆಗಿರುವ ಕಾರಣ ಮಂಕಾಳ ವೈದ್ಯ ಡಿ.ಕೆ.ಶಿ.ಸಂಪುಟದಲ್ಲಿ ಸಚಿವರಾಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ. ಯಾವ ಖಾತೆ ಸಿಗಲಿದೆ ಎಂಬುದು ಇನ್ನಷ್ಟೇ ನಿಗದಿಯಾಗಲಿದೆ.