ಕಾರವಾರ: ನೌಕಾ ದಿನಾಚರಣೆಯ ಅಂಗವಾಗಿ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ‘ಸಂಬಂಧ’ (ನೇವಿ ಡೇ ಅಟ್ ಹೋಮ್) ಕಾರ್ಯಕ್ರಮವು ಗುರುವಾರ ವಿಜೃಂಭಣೆಯಿಂದ ಜರುಗಿತು.
ಕರ್ನಾಟಕ ನೌಕಾ ವಲಯದ ಮುಖ್ಯಸ್ಥರ ಅಧಿಕೃತ ನಿವಾಸ "ನೇವಿ ಹೌಸ್" ನಲ್ಲಿ ಸಾಯಂಕಾಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅತಿಥಿಯಾಗಿ ಪಾಲ್ಗೊಂಡರು.
ಸಂಜೆಯ ಮುಖ್ಯ ಆಕರ್ಷಣೆಯಾಗಿದ್ದ "ಬೀಟಿಂಗ್ ರಿಟ್ರೀಟ್" ಸಮಾರಂಭದಲ್ಲಿ ನೌಕಾಪಡೆಯ ಕದಂಬ ಬ್ಯಾಂಡ್ ಸಂಗೀತ ಗಮನ ಸೆಳೆಯಿತು. ವಂದೇ ಮಾತರಂ ಗೀತೆಯನ್ನು ನುಡಿಸಲಾಯಿತು.
ಕಾರವಾರ ನೌಕಾ ಬಂದರಿನಲ್ಲಿ ಲಂಗರು ಹಾಕಿದ ಯುದ್ಧ ನೌಕೆಗಳು ಸೂರ್ಯಾಸ್ತದ ಹೊತ್ತಿನಲ್ಲಿ ಅದ್ಬುತ ನೋಟವನ್ನು ಮೂಡಿಸಿತು. ಕಾರವಾರದ ನೇವಿ ಚಿಲ್ಡ್ರನ್ ಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ನೌಕಾ ಸಮುದಾಯದ ಕಲಾವಿದರು ನೀಡಿದ ಮನಮೊಹಕ ಪ್ರದರ್ಶನಗಳು ಭಾರತದ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸಿ ಕಾರ್ಯಕ್ರಮಕ್ಕೆ ವಿಶೇಷ ಸೊಬಗು ನೀಡಿದವು.
1971 ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ನೌಕಾ ಸೇನೆಯ ಹಡಗುಗಳು ಆಪರೇಶನ್ ಟ್ರಿಡೆಂಟ್ ಹೆಸರಿನಲ್ಲಿ ಪಾಕಿಸ್ತಾನದ ಕರಾಚಿ ಬಂದರನ್ನು ಪುಡಿಗಟ್ಟಿದ ನೆನಪಿಗಾಗಿ ಪ್ರತಿ ವರ್ಷ ಡಿ.4 ರಂದು
ನೌಕಾ ದಿನವನ್ನು ಆಚರಿಸಲಾಗುತ್ತದೆ. ಇದು ಭಾರತೀಯ ನೌಕಾಪಡೆಯ ಧೈರ್ಯ, ಕಾರ್ಯಾಚರಣೆ ಸಾಮರ್ಥ್ಯವನ್ನು ತಿಳಿಸುವ ದಿನವಾಗಿದೆ.