ಹೊನ್ನಾವರ ತಾಲೂಕಿನ ಮೋಟೆ ತೂಗು ಸೇತುವೆ ಕೇಬಲ್ ತುಂಡಾಗಿರುವುದು.  
ಉತ್ತರ ಕನ್ನಡ

ನಾಥಗೇರಿ ಮೋಟೆ ಸೇತುವೆ ತಂತಿ ಕಟ್

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿಮೋಟೆ ಸಂಪರ್ಕಿಸುವ ತೂಗು ಸೇತುವೆಯ ತಂತಿ ತುಂಡಾಗಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ನಾಥಗೇರಿ ಮತ್ತು ಮೋಟೆ ಗ್ರಾಮಸ್ಥರಿಗೆ ನಿತ್ಯ ಸಂಚಾರಕ್ಕೆ ಹಾಗೂ ಪ್ರವಾಹದ ಸಮಯದಲ್ಲಿ ಈ ಸೇತುವೆ ಆಸರೆಯಾಗಿತ್ತು. ಸೇತುವೆ ಹಾನಿಗೊಳಗಾಗಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನದಿ ದಾಟಲು ದೋಣಿಯನ್ನು ಆಶ್ರಸುವಂತಾಗಿದೆ. ಸೇತುವೆಯನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಚಿತ್ರೀಕರಣದ ವೇಳೆ ಘಟನೆ

ಕೆಲ ತಿಂಗಳುಗಳಿಂದ ಶಿಥಿಲಾವಸ್ಥೆ ತಲುಪಿದ್ದ ಈ ಸೇತುವೆ ಎರಡು ದಿನಗಳ ಹಿಂದೆ ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ಒಂದು ತಂತಿ ತುಂಡಾಗಿದೆ.

ಆಂಧ್ರಪ್ರದೇಶದ ಆರ್.ಕೆ. ದುಗ್ಗಲ್ ಸ್ಟುಡಿಯೋಸ್ ತಂಡವು ತೆಲುಗು ಸಿನಿಮಾಮೊಂದರ ಚಿತ್ರೀಕರಣಕ್ಕಾಗಿ ಮೋಟೆ ತೂಗು ಸೇತುವೆಯ ಮೇಲೆ ಭಾರಿ ತೂಕದ ಚಿತ್ರೀಕರಣ ಸಾಮಗ್ರಿಗಳನ್ನು ಸಾಗಿಸುತ್ತಿತ್ತು.

ಈ ವೇಳೆ ಏಕಾಏಕಿ ಸೇತುವೆಯ ಒಂದು ಬದಿಯ ಕಬ್ಬಿಣದ ಹಗ್ಗ (ಕೇಬಲ್) ತುಂಡಾಗಿ ಸೇತುವೆ ಪಕ್ಕಕ್ಕೆ ವಾಲಿದೆ. ಸಮೀಪದಲ್ಲಿದ್ದ ತೆಂಗಿನ ಮರಕ್ಕೆ ಸೇತುವೆ ಒರಗಿದ್ದರಿಂದ ಪೂರ್ಣ ಪ್ರಮಾಣದಲ್ಲಿ ನದಿಗೆ ಉರುಳುವುದು ತಪ್ಪಿದೆ. ಇದರಿಂದಾಗಿ ಸೇತುವೆ ಮೇಲಿದ್ದ ಚಿತ್ರತಂಡದ ಸದಸ್ಯರು ಮಹಾ ಗಂಡಾಂತರದಿಂದ ಪಾರಾಗಿದ್ದಾರೆ.

ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆಯು ಶಿಥಿಲಾವಸ್ಥೆಗೆ ತಲುಪಿತ್ತು. ಹೀಗಾಗಿ ‘ಸೇತುವೆ ಸುರಕ್ಷಿತವಾಗಿಲ್ಲ, ಭಾರಿ ಸಾಮಗ್ರಿ ಸಾಗಣೆ ಹಾಗೂ ಹೆಚ್ಚಿನ ಜನರ ಸಂಚಾರವನ್ನು ನಿಷೇಧಿಸಲಾಗಿದೆ’ ಎಂದು ಖರ್ವಾ ಗ್ರಾಮ ಪಂಚಾಯಿತಿಯು ಎಚ್ಚರಿಕೆ ಫಲಕ ಅಳವಡಿಸಿತ್ತು. ಇದನ್ನು ಗಮನಿಸದ ಚಿತ್ರತಂಡವು ನಿಯಮ ಮೀರಿ ಭಾರಿ ತೂಕದ ಉಪಕರಣಗಳನ್ನು ಒಯ್ದಿರುವುದೇ ಟನೆಗೆ ಕಾರಣ ಎನ್ನಲಾಗಿದೆ.

ಟನಾ ಸ್ಥಳಕ್ಕೆ ಪಿಡಿಒ ಗಿರೀಶ ನಾಯಕ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡ ಹಾಗೂ ತಾಲೂಕು ಪಂಚಾಯಿತಿ ನಿರ್ದೇಶಕ ಕಿರಣಕುಮಾರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿತ್ರತಂಡದ ಗೌತಮ್ ಹಾಗೂ ರಾಜೇಶ್ ದುರಸ್ತಿ ಮಾಡಿಕೊಡಲು ಒಪ್ಪಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.