ಸಿದ್ದಾಪುರದಲ್ಲಿ ತಾಲೂಕು ಬಿಜೆಪಿ ಹಾಗೂ ಜೆಡಿಎಸ್ ಘಟಕದವರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ತಿಮ್ಮಪ್ಪ ಎಂ.ಕೆ, ಕೆ.ಜಿ.ನಾಯ್ಕ, ಉಪೇಂದ್ರ ಪೈ, ಅನಂತಮೂರ್ತಿ ಹೆಗಡೆ, ಮಾರುತಿ ನಾಯ್ಕ, ದರ್ಶನ ಹೆಗಡೆ, ಗುರುರಾಜ ಶಾನಭಾಗ, ಅಣ್ಣಪ್ಪ ನಾಯ್ಕ, ಜಯಶ್ರೀ ಗೌಡ, ಇತರರಿದ್ದರು. 
ಉತ್ತರ ಕನ್ನಡ

ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ Murder case

ಪ್ರಮುಖ ಮುಖ್ಯಾಂಶಗಳು

  • ಕಾನಸೂರು ವಸತಿ ಶಾಲೆಯ ವಿದ್ಯಾರ್ಥಿ ಸಾವು ಘಟನೆಗೆ ತಿರುವು
  • ಬಾಲಕನ ತಾಯಿಯಿಂದ ದೂರು
  • ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಸಿದ್ದಾಪುರ: ಕಾನಸೂರು ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಯ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಮೃತ ಬಾಲಕನ ತಾಯಿ ದೂರು ನೀಡಿದ್ದು, ಘಟನೆ ನಡೆದು 15 ದಿನಗಳ ನಂತರ ಸಿದ್ದಾಪುರ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ (Murder Case) ದಾಖಲಾಗಿದೆ.
ಜೂನ್ 9 ರಂದು ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಹುತ್ತಗಾರಿನ ಗೋಕುಲ ಕೃಷ್ಣ ಗೌಡ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.
ಆತ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನುಮಾನವಿದ್ದು, ತನಿಖೆ ಕೈಗೊಳ್ಳುವಂತೆ ಸಾಕಷ್ಟು ಪ್ರತಿಭಟನೆಗಳು ನಡೆಸಿದ್ದವು.
ನಂತರ ಪ್ರಭಾರ ಪ್ರಾಂಶುಪಾಲ ಜಾವೇದ್ ಹಾಗೂ ನಿಲಯ ಪಾಲಕ ಅಬ್ಬು ತಲಾ ಅವರನ್ನು ಅಮಾನತು ಮಾಡಿ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎಂಡಿ ಆದೇಶ ಹೊರಡಿಸಿದ್ದರು.
ಶಿರಸಿ ಬದಲು ಕಾರವಾರ ಡಿವೈಎಸ್‌ಪಿ ಗಿರೀಶ ಎಸ್.ವಿ.ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ತನಿಖೆ ಮುಂದುವರಿದಿದ್ದು, ಮಂಗಳವಾರ ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಕೃಷ್ಣ ಗೌಡ ಅವರಿಂದ ದೂರು ಪಡೆದು ಎಫ್ಐಆರ್‌ನಲ್ಲಿ ಹಿಂದಿ ಶಿಕ್ಷಕ ಹಾಗೂ ಪ್ರಭಾರ ನಿಲಯ ಪಾಲಕ ಅಬ್ಬು ತಲಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಕೊಲೆ (ಬಿಎನ್‌ಎಸ್‌ಎಸ್-103) ಹಾಗೂ ಅಪ್ರಾಪ್ತರ ಮೇಲೆ ಕ್ರೂರತೆ (ಜೆಜೆ ಆ್ಯಕ್ಟ್ ಸೆಕ್ಷನ್ 75)ಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಎಫ್ಐಆರ್‌ನಲ್ಲಿ ಏನಿದೆ..?

ಗೋಕುಲ್ 2 ವರ್ಷದಿಂದ ಶಾಲೆಯಲ್ಲಿ ಓದುತ್ತಿದ್ದ. ಒಂದು ದಿನ ಭೇಟಿಯಾಗಲು ಶಾಲೆಗೆ ಹೋದಾಗ ಆತನ ಕುತ್ತಿಗೆ ಬಳಿ ಊದಿಕೊಂಡಿತ್ತು.
ಏಕೆಂದು ಕೇಳಿದರೆ ಹುಡುಗ ಏನೂ ಹೇಳಿರಲಿಲ್ಲ. ನಂತರ ಬೇಸಿಗೆ ರಜೆಗೆ ಮನೆಗೆ ಬಂದಾಗ ಕೇಳಿದಾಗ. ‘ಅಬ್ಬು ಸರ್ ಬಾತ್‌ರೂಂ ಬಳಿ 9 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೆ.
ಸರ್ ಅದನ್ನು ಗಮನಿಸಿ, ನನ್ನ ಕುತ್ತಿಗೆ ಒತ್ತಿ ಹಿಡಿದಿದ್ದರು. ನೀನು ಯಾರಿಗಾದರೂ ಈ ವಿಷಯವನ್ನು ಹೇಳಿದರೆ, ನಿನ್ನನ್ನು ಸಾಯಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.’ ಎಂದು ಗೋಕುಲ್ ತಿಳಿಸಿದ್ದ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಅಬ್ಬು ಸರ್ ಈ ಹಿಂದೆ ಹಾರ್ಸಿಕಟ್ಟಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿ ವರ್ಗಾವಣೆಯಾಗಿದ್ದಾರೆ ಎಂದು ನನ್ನ ಹಿರಿಯ ಮಗ ತಿಳಿಸಿದ್ದ.
ಗೋಕುಲ್ ಸಾಯುವ ಸಮಯಕ್ಕೆ ಇಡೀ ಊರಿನಲ್ಲಿ ಕರೆಂಟ್ ಇದ್ದರೂ ಹಾಸ್ಟೆಲ್‌ನಲ್ಲಿ ಮಾತ್ರ ಕರೆಂಟ್ ಇರಲಿಲ್ಲ.
ಅವರ ಅಸಭ್ಯ ವರ್ತನೆಯನ್ನು ನನ್ನ ಮಗ ಮತ್ತೆ ನೋಡಿರಬಹುದು. ಯಾರಿಗಾದರೂ ಹೇಳಿದರೆ ಎಂಬ ಭಯದಿಂದ ಅವರು ನನ್ನ ಮಗನ ಸಾವಿಗೆ ಕಾರಣರಾಗಿರಬಹುದು ಎಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ನಿಷ್ಪಕ್ಷಪಾತ ತನಿಖೆಯಾಗಲಿ

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ವಸತಿ ಶಾಲೆ ವಿದ್ಯಾರ್ಥಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಹಸೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಮಾತನಾಡಿ, ಆಡಳಿತ ಪಕ್ಷದ ಮುಖಂಡರೇ ತಾಲೂಕಿನಲ್ಲಿ ಅವ್ಯವಹಾರ, ಭ್ರಷ್ಟಾಚಾರ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನೆ ಮಾಡುತ್ತಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಸ್ಪಷ್ಟವಾಗುತ್ತದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಮಾತನಾಡಿ, ವಸತಿ ಶಾಲೆಯ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹೇಳಿಕೆಗಳು ಭಿನ್ನವಾಗಿವೆ. ಇದರಿಂದ ಇದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಶಂಕೆ ಬಲವಾಗುತ್ತದೆ ಎಂದರು.
ಅನಂತಮೂರ್ತಿ ಹೆಗಡೆ ಮಾತನಾಡಿ, ವಸತಿ ಶಾಲೆಯ ಶಿಕ್ಷಕರೊಬ್ಬರು ಗೋಕುಲ ಗೌಡನಿಗೆ ಹೊಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದರು.
ಜೆಡಿಎಸ್ ಮುಖಂಡ ಉಪೇಂದ್ರ ಪೈ, ಪ್ರಕರಣವನ್ನು ದಾರಿ ತಪ್ಪಿಸಲು ಆರಂಭದಿಂದಲೇ ಪ್ರಯತ್ನ ನಡೆದಿದೆ ಎಂದರು.
ತಾಲೂಕು ಬಿಜೆಪಿ ಘಟಕ ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ತಾಲೂಕು ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಎಬಿವಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ ಹೆಗಡೆ, ಪ್ರಮುಖರಾದ ಗುರುರಾಜ ಶಾನಭಾಗ, ನಂದನ ಬೋರ್ಕರ್, ಅಣ್ಣಪ್ಪ ನಾಯ್ಕ ಮಾತನಾಡಿದರು.
ಪ್ರಭಾರ ತಹಸೀಲ್ದಾರ್ ರಮೇಶ ಹೆಗಡೆ ಅವರ ಮೂಲಕ ಜಿಲ್ಲಾಧಿಕಾರಿಗೆ ಮತ್ತು ಸ್ಥಳಕ್ಕೆ ಆಗಮಿಸಿದ ಕಾರವಾರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ ವೈ. ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ರಾಘವೇಂದ್ರ ಶಾಸ್ತ್ರಿ, ಮಂಜುನಾಥ ಭಟ್ಟ, ಕೃಷ್ಣಮೂರ್ತಿ ಕಡಕೇರಿ, ಕೃಷ್ಣಮೂರ್ತಿ ನಾಯ್ಕ ಐಸೂರು, ಸುರೇಶ ನಾಯ್ಕ, ಸುಜಾತಾ ಭಟ್ಟ, ಮಹಾದೇವಿ ಗೌಡ, ಮಂಗಲಾ ಗೌಡ, ಜೆಡಿಎಸ್‌ನ ಸತೀಶ ಹೆಗಡೆ, ಮತ ವಿದ್ಯಾರ್ಥಿಯ ಪಾಲಕರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.