ನಗರಸಭೆ ಸಿಬ್ಬಂದಿ ಫುಟ್‌ಪಾತ್ ಅತಿಕ್ರಮಣ ತೆರವು ಮಾಡಿದರು.
ಕಾರವಾರ: ನಗರದ ಫುಟ್ ಪಾತ್ ಅತಿಕ್ರಮಿಸಿ ಗೂಡಂಗಡಿಕಾರರು ಇಟ್ಟುಕೊಂಡಿದ್ದ ಸಾಮಗ್ರಿಗಳನ್ನು ನಗರಸಭೆ ಸಿಬ್ಬಂದಿ ಬುಧವಾರ ವಶಕ್ಕೆ ಪಡೆದರು.
ನಗರದ ಪಿಕಳೆ ರಸ್ತೆ, ಕಮಲಾಕರ ರಸ್ತೆ, ಎಂಜಿ ರಸ್ತೆಗಳಲ್ಲಿ ಗೂಡಂಗಡಿಕಾರರು ತಮ್ಮ ಗೂಡಂಗಡಿಯ ಜೊತೆ ಇಟ್ಟುಕೊಂಡಿದ್ದ ಫ್ರಿಜ್‌ಗಳು, ಟೇಬಲ್‌ಗಳು ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದರು. ಬೆಳಗ್ಗೆ ಗೂಡಂಗಡಿಕಾರರು ತಮ್ಮ ಕಾರ್ಯ ಚಟುವಟಿಕೆ ಪ್ರಾರಂಭಿಸುವುದಕ್ಕೂ ಪೂರ್ವದಲ್ಲಿ ನಗರಸಭೆಯ 20 ಕ್ಕೂ ಹೆಚ್ಚು ಸಿಬ್ಬಂದಿ ಜೆಸಿಬಿ ಮೂಲಕ ಕಾರ್ಯಾಚರಣೆಗೆ ಇಳಿದು, 20 ಕ್ಕೂ ಹೆಚ್ಚು ಗುಂಡAಗಡಿಗಳ ಸಾಮಗ್ರಿಗಳನ್ನು ವಾಹನದಲ್ಲಿ ಹಾಕಿಕೊಂಡು ನಗರಸಭೆಗೆ ಕೊಂಡೊಯ್ದರು.
ಫುಟ್‌ಪಾತ್‌ಗಳಲ್ಲಿ ಗೂಡಂಗಡಿ ನಡೆಸಲು ಅವಕಾಶ ನೀಡಲಾಗಿದೆ. ಪ್ರತಿ ಅಂಗಡಿಗೂ ಸಂಖ್ಯೆ ನೀಡಲಾಗಿದೆ. ಅವರು ಹಗಲು ಹೊತ್ತಿನಲ್ಲಿ ಒಂದೆಡೆ ನಿಂತು ವ್ಯಾಪಾರ ಮಾಡಿ, ರಾತ್ರಿ ಗಾಡಿಗಳನ್ನು ತೆರವು ಮಾಡಬೇಕು ಎಂಬುದು ಷರತ್ತು. ಆದರೆ, ಹಲವು ಗೂಡಂಗಡಿಕಾರರು ತಮ್ಮ ತಳ್ಳು ಗಾಡಿಗಳ ಜೊತೆಗೆ ಸಾಕಷ್ಟು ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಇಟ್ಟು ಹೋಗುತ್ತಿದ್ದಾರೆ. ನಗರದ ಸ್ವಚ್ಛತೆಗೆ, ಸೌದರ್ಯಕ್ಕೆ ಧಕ್ಕೆಯಾಗುತ್ತಿದೆ. ಓಡಾಟಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದರು.