ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಸುತ್ತ ಬೆಳೆದು ನಿಂತಿವೆ ಗಿಡ, ಗಂಟಿಗಳು.  
ಉತ್ತರ ಕನ್ನಡ

ಪಾಲಿಟೆಕ್ನಿಕ್ ಕಟ್ಟಡಕ್ಕೆ ಕಸದ ಬಳ್ಳಿ ಹೊದಿಕೆ POLITECNIC

ಪ್ರಮುಖ ಮುಖ್ಯಾಂಶಗಳು

  • ಮುಂಡಗೋಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಸುತ್ತ ಬೆಳೆದು ನಿಂತಿವೆ ಗಿಡ, ಗಂಟಿಗಳು
ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಗ್ರಾಮದ ಬಳಿಯಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದ ಸುತ್ತ ಗಿಡ, ಗಂಟಿಗಳು ಬೆಳೆದಿದ್ದು, ಗೋಡೆ, ಕಿಟಕಿಗನ್ನು ಆವರಿಸಿವೆ. ಇಷ್ಟಾದರೂ ಕಾಲೇಜಿನ ಸಿಬ್ಬಂದಿ ಅದನ್ನು ಸ್ವಚ್ಛಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಗಿನಕೊಪ್ಪ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಿಸಲಾಗಿದೆ. ಕಾಲೇಜು ಹಾಗೂ ವಸತಿ ನಿಲಯದ ಪಕ್ಕದಲ್ಲೇ ಜೋಗೇಶ್ವರ ಹಳ್ಳವಿದೆ. ಮಳೆಗಾಲದಲ್ಲಿ ಈ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತದೆ.
ಬೆಳೆದು ನಿಂತ ಬಳ್ಳಿಗಳು: ಕಾಲೇಜು ಮುಂಭಾಗದಲ್ಲಿ ಬಾಲಕಿಯರ ವಸತಿ ನಿಲಯದ ಕಟ್ಟಡವಿದೆ. ಕಟ್ಟಡದ ಸುತ್ತ ಗಿಡ, ಗಂಟಿಗಳು ಹಾಗೂ ಬಳ್ಳಿಗಳು ಬೆಳೆದಿದ್ದು, ಸಂಪೂರ್ಣ ಕಟ್ಟಡವನ್ನು ಆವರಿಸುವ ಹಂತ ತಲುಪಿದೆ. ಅಲ್ಲದೆ, ಕಾಲೇಜು ಆವರಣದಲ್ಲಿ ಕಸದ ಗಿಡಗಳು ಬೆಳೆದಿದ್ದು, ಅವುಗಳನ್ನು ಕೂಡ ಸಿಬ್ಬಂದಿ ತೆರವು ಮಾಡುವ ಗೋಜಿಗೆ ಹೋಗಿಲ್ಲ. 
ಪಾಳು ಬಿದ್ದ ಕಟ್ಟಡ: ಹಳ್ಳದ ದಡದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಹಳ್ಳದ ನೀರಿಗೆ ಮಣ್ಣು ಕತ್ತರಿಸುತ್ತಿರುವ ಪರಿಣಾಮ ಈ ಕಟ್ಟಡ ಅಪಾಯದಲ್ಲಿದೆ. ಈ ಉದ್ದೇಶದಿಂದ ಕಾಲೇಜಿನವರು ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಈವರೆಗೂ ಹಸ್ತಾಂತರ ಮಾಡಿಕೊಂಡಿಲ್ಲ. ಇದರಿಂದಾಗಿ ನೂತನ ಕಟ್ಟಡ ಪಾಳು ಬಿದ್ದಿದೆ.
ಸಿಬ್ಬಂದಿಗಳಿದ್ದರೂ ಸ್ವಚ್ಛತೆ ಇಲ್ಲ:
ಡಿಪ್ಲೊಮಾ ಕಾಲೇಜಿನಲ್ಲಿ ಸದ್ಯ ಒಂಬತ್ತು ಜನ ಡಿ ದರ್ಜೆ ಸಿಬ್ಬಂದಿ ಇದ್ದಾರೆ. ಹಗಲು ಹೊತ್ತಿನಲ್ಲಿ ಏಳು ಜನ ಹಾಗೂ ರಾತ್ರಿ ಕಾವಲು ಅಂತಾ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇಷ್ಟೊಂದು ಸಿಬ್ಬಂದಿ ಇದ್ದರೂ ಕಟ್ಟಡಕ್ಕೆ ಹಬ್ಬಿರುವ ಗಿಡ, ಗಂಟಿ, ಬಳ್ಳಿ ಹಾಗೂ ಕಸವನ್ನು ಯಾಕೆ ಸ್ವಚ್ಛಗೊಳಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಕಾಲೇಜ್ ಪ್ರಾಚಾರ್ಯರು ಕೂಡೀ ಬಗ್ಗೆ ನಿರ್ಲಕ್ಷೃ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. 
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಇದೀಗ ಡಿಪ್ಲೊಮಾ ಕಾಲೇಜಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಪಡೆಯಲು ತೆರಳುತ್ತಿದ್ದಾರೆ. ಆದರೆ, ಕಾಲೇಜಿನ ಸುತ್ತ ಸ್ವಚ್ಛತೆ ಇಲ್ಲದೆ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 
ಈ ಕುರಿತು ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ, ಕೂಡಲೇ ಕಾಲೇಜು ಹಾಗೂ ವಸತಿ ನಿಲಯದ ಸುತ್ತ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದರೆ ಇಲ್ಲಿರುವ ಡಿ ದರ್ಜೆಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. 
"

ಕರಗಿನಕೋಪ್ಪ ಡಿಪ್ಲೊಮಾ ಕಾಲೇಜ್ ಕಟ್ಟಡದ ಸುತ್ತ ಹಾಗೂ ಆವರಣದಲ್ಲಿ ಗಿಡ, ಗಂಟಿಗಳು ಬೆಳೆದು ನಿಂತಿವೆ. ಇಡೀ ಕಟ್ಟಡಕ್ಕೆ ಬಳ್ಳಿಗಳು ಬೆಳೆದು ನಿಂತಿದ್ದರೂ ಕಾಲೇಜಿನ ಸಿಬ್ಬಂದಿ ಸ್ವಚ್ಛತೆ ಮಾಡಿಸದೇ ನಿರ್ಲಕ್ಷೃ ವಹಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲೇಜು ಸುತ್ತ ತಕ್ಷಣ ಸ್ವಚ್ಛತಾ ಕಾರ್ಯ ನಡೆಸಬೇಕು. ಬಸವರಾಜ ಮುಂಡಗೋಡಸ್ಥಳೀಯ ನಿವಾಸಿ

"

ಬಾಲಕಿಯರ ವಸತಿ ನಿಲಯ ಕಟ್ಟಡ ಹಳ್ಳದ ದಡದಲ್ಲಿದೆ. ಈ ಕಟ್ಟಡಕ್ಕೆ ಸುರಕ್ಷತೆ ಇಲ್ಲದ ಕಾರಣ ಈವರೆಗೂ ಹಸ್ತಾಂತರ ಮಾಡಿಕೊಂಡಿಲ್ಲ. ಇನ್ನು ಕಟ್ಟಡದ ಸುತ್ತ ಮತ್ತು ಆವರಣದಲ್ಲಿ ಬೆಳೆದ ಗಿಡ, ಗಂಟಿ ಹಾಗೂ ಬಳ್ಳಿಗಳನ್ನು ಕೂಡಲೇ ಸ್ವಚ್ಛತೆ ಮಾಡಿಸುತ್ತೇವೆ.
ಕೃಷ್ಣಪ್ಪ ಪ್ರಾಂಶುಪಾಲ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಡಗೋಡ