ಕಾರವಾರದಲ್ಲಿ ಔಷಧಿ ಅಂಗಡಿ ಬಂದ್ ಆಗಿತ್ತು.
ಕಾರವಾರ: ಆನ್‌ಲೈನ್‌ನಲ್ಲಿ ಔಷಧ ಮಾರಾಟ ಹಾಗೂ ವಿಶೇಷ ರಿಯಾಯಿತಿ ನೀಡುವುದನ್ನು ಖಂಡಿಸಿ ಆಲ್ ಇಂಡಿಯಾ ಆರ್ಗನೈಜೇಶನ್ ಆಫ್ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ (ಎಐಒಸಿಡಿ) ಕರೆ ನೀಡಿರುವ ಬಂದ್ ಕರೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಬಹುತೇಕ ಎಲ್ಲ ವೈಯಕ್ತಿ ಔಷಧ ಅಂಗಡಿಗಳು ಬಂದ್ ಆಗಿದ್ದವು.
ಕೆಲವು ಕಾರ್ಪೊರೇಟ್ ಸಂಸ್ಥೆಗಳು ನಿಯಮ ಮೀರಿ ಆನ್‌ಲೈನ್‌ನಲ್ಲಿ ಔಷಧಗಳ ಮಾರಾಟ ಮತ್ತು ಅದಕ್ಕೆ ವಿಶೇಷ ರಿಯಾಯಿತಿ ನೀಡುತ್ತಿವೆ. ಇದರಿಂದ ಮುಂದಿನ ದಿನದಲ್ಲಿ ಔಷಧ ಅಂಗಡಿಗಳು ಬಂದ್ ಆಗುವ ಆತಂಕವಿದೆ. ಗುಣಮಟ್ಟವಲ್ಲದ ಔಷಧ ಮಾರಾಟದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಎಐಒಸಿಡಿ ಕರೆ ನೀಡಿತ್ತು.
ಜಿಲ್ಲೆಯಲ್ಲಿ 573 ರೀಟೇಲ್ ಔಷಧ ಅಂಗಡಿಗಳಿವೆ. ಅದರಲ್ಲಿ ಅಪೋಲೋ, ಮೆಡ್‌ಪ್ಲಸ್, ವೆಲ್‌ನೆಸ್ ಮುಂತಾದ ಕಾರ್ಪೋರೇಟ್ ಔಷಧ ಅಂಗಡಿಗಳು ಹಾಗೂ ಜನಔಷಧ ಕೇಂದ್ರಗಳು ಮತ್ತು ಕ್ಲೀನಿಕ್‌ಗಳ ಜೊತೆ ಇರುವ ಅಂಗಡಿಗಳು ತೆರೆದಿದ್ದವು. ಉಳಿದ ಎಲ್ಲ ವೈಯಕ್ತಿಕ ಅಂಗಡಿಗಳು ಬಂದ್ ಆಗಿದ್ದವು. ಔಷಧಕ್ಕೆ ತೊಂದರೆ ಅನುಭವಿಸಿದ ಯಾವುದೇ ದೂರುಗಳು ಬಂದಿಲ್ಲ ಎಂದು ಜಿಲ್ಲಾ ಡ್ರಗ್ ಕಂಟ್ರೋಲರ್ ನಾಗರಾಜ ಅವರು ತಿಳಿಸಿದ್ದಾರೆ.