ಗೋಕರ್ಣ ಬಳಿಯ ಬಾವಿಕೊಡ್ಲ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಗೋಕರ್ಣ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ರೈತ ಕ್ಷೇತ್ರ ಪಾಠಶಾಲೆ ನಿಮಿತ್ತ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಕೃಷಿ ಅಧಿಕಾರಿ ಮೋಹನ ನಾಯ್ಕ, ಇವತ್ತಿನ ಕೃಷಿ ಕ್ಷೇತ್ರ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿದೆ. ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಸಮಯ ಮತ್ತು ಹೆಚ್ಚಿನ ಕಾರ್ಮಿಕರ ಅಗತ್ಯವಿದೆ. ಆಧುನಿಕ ಯಾಂತ್ರೀಕೃತ ಕೃಷಿಯಲ್ಲಿ ಕಡಿಮೆ ಕಾರ್ಮಿಕರು ಮತ್ತು ಸಮಯ ಸಾಕು. ಇದರಿಂದ ಉಳುಮೆ, ಬಿತ್ತನೆ ಮತ್ತು ಕಟಾವಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಸಾಧ್ಯ. ಇದರ ಜೊತೆಗೆ ಸರ್ಕಾರದ ವಿವಿಧ ಕೃಷಿ ಯೋಜನೆಗಳಿಂದ ಯಂತ್ರೋಪಕರಣ, ಗೊಬ್ಬರ, ಬೀಜ ಇತ್ಯಾದಿಗಳನ್ನು ಸಬ್ಸಿಡಿಯಿಂದ ರೈತರು ಪಡೆಯುವ ಅವಕಾಶವಿದೆ ಕಾರಣ ರೈತರು ಆಧುನಿಕ ಬೇಸಾಯ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬಾವಿಕೊಡ್ಲ ಒಕ್ಕೂಟ ಅಧ್ಯಕ್ಷ ಬೀರ ಗೌಡ, ಸದಸ್ಯರು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ದೀಪಕ ನಾಯ್ಕ, ಕೃಷಿ ಮೇಲ್ವಿಚಾರಕ ಚಿದಾನಂದ ಮತ್ತು ಸೇವಾ ಪ್ರತಿನಿಧಿ ರೇಷ್ಮಾ ನಿರ್ವಹಿಸಿದರು.