ಜೈಲ್ ನಲ್ಲಿ ವಶಪಡಿಸಿಕೊಂಡ ಮೊಬೈಲ್ ಗಳು
ಕಾರವಾರ: ಇಲ್ಲಿನ ಜೈಲಿನಲ್ಲಿ ಮತ್ತಷ್ಟು ಮೊಬೈಲ್ ಗಳು ಸಿಕ್ಕಿವೆ.
ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ತಪಾಸಣೆ ನಡೆಸಿದಾಗ 7 ಮೊಬೈಲ್ ಸೇರಿ ಇನ್ನೂ ಹಲವು ನಿಷೇಧಿತ ವಸ್ತುಗಳು ಕಂಡುಬಂದಿವೆ.
ಜೈಲಿನಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಗಲಾಟೆ ನಡೆದಿತ್ತು. ಮಾದಕ ಪದಾರ್ಥ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದರು.
ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಂಪ್ಯೂಟರ್, ಟಿವಿ ಒಡೆದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಬ್ಯಾರಕ್'ಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಶಹರ ಠಾಣೆಯಲ್ಲಿ ಈ ಸಂಬಂಧ ಜೈಲರ್ ದೂರು ದಾಖಲಿಸಿದ್ದಾರೆ.
ಈ ನಡುವೆ ಜೈಲಿನಲ್ಲಿದ್ದ ಮಂಗಳೂರು ಮೂಲದ ನಾಲ್ವರು ಕೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಮಂಗಳೂರು ಜೈಲ್ ನಿಂದ ನಾಲ್ವರನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿತ್ತು. ಅವರೇ ಗಲಾಟೆಗೆ ಕಾರಣವಾಗಿದ್ದರು ಅವರನ್ನು ಬಳ್ಳಾರಿ, ಬೆಳಗಾವಿ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.