ಗಣಪತಿ ಉಳ್ವೇಕರ್‌  
ಉತ್ತರ ಕನ್ನಡ

ತೇಲುವ ಜಟ್ಟಿ ತೋರಿಸಿಕೊಡಿ : ಸದನದಲ್ಲಿ ಉಳ್ವೇಕರ್‌ ಪ್ರಶ್ನೆ

ಕಾರವಾರ: ಸದಾಶಿವಗಡದಲ್ಲಿ ಕಾಳಿ ನದಿಯಲ್ಲಿ ಮೆರಿಟೈಮ್ ಬೋರ್ಡ್ನಿಂದ ನಿರ್ಮಾಣ ಮಾಡಲಾಗಿದ್ದ ತೇಲುವ ಜಟ್ಟಿಯನ್ನು ತೆರವು ಮಾಡಲಾಗಿದ್ದು, ಸಿಆರ್‌ಜಡ್ ಅನುಮತಿ ಪಡೆದು, ಮರು ನಿರ್ಮಾಣ ಮಾಡಲಾಗುವುದು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರ ಸಿಆರ್‌ಜಡ್ ಅನುಮತಿ ಪಡೆಯದೇ ತೇಲುವ ಜಟ್ಟಿಯುನ್ನು ಕಾಳಿ ನದಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಸಿಆರ್‌ಜಡ್ ಆಕ್ಷೇಪಣೆಯಾದ ಕಾರಣ ತೆರವು ಮಾಡಲಾಗಿದೆ ಎಂದರು.
ಮೆರಿಟೈಮ್ ಬೋರ್ಡ್ನಲ್ಲಿ ಬಂದರು ಇಲಾಖೆ ನಿರ್ದೇಶಕರು ಸೇರಿ ಹಲವು ಪ್ರಮುಖ ಹುದ್ದೆಗಳು ಖಾಲಿ ಇರುವ ಬಗ್ಗೆ ಉಳ್ವೇಕರ್ ಪ್ರಶ್ನೆ ಮಾಡಿದ್ದರು. ನಿರ್ದೇಶಕರು ಸೇರಿ ಪ್ರಮುಖ ಹುದ್ದೆಗಳಿಗೆ ಅರ್ಜಿ ಕರೆದರೂ ಯಾರೂ ಬರುತ್ತಿಲ್ಲ. ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ ಎಂದರು. ಹುದ್ದೆಗಳಿಗೆ ಯಾವ ತಿಂಗಳ ಒಳಗೆ ನೇಮಕಾತಿ ಮಾಡುತ್ತೀರಿ ಎಂದು ಖಚಿತವಾಗಿ ಹೇಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಚಿವರಿಗೆ ತಾಕೀತು ಮಾಡಿದರು.