ದೈವಜ್ಞ ಸೊಸೈಟಿ  
ಉತ್ತರ ಕನ್ನಡ

ದೈವಜ್ಞ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣ ದುರುಪಯೋಗ



ಕಾರವಾರ: ಇಲ್ಲಿನ ದೈವಜ್ಞ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಂಕೋಲಾ ಶಾಖೆಯ ಸಿಬ್ಬಂದಿಯೊಬ್ಬ ಬಡ ಗ್ರಾಹಕರು ಅಡವಿಟ್ಟ ಬಂಗಾರ, ಹಣವನ್ನು ಲೂಟಿ ಮಾಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಸೊಸೈಟಿಯ ಅಂಕೋಲಾ ಶಾಖೆಯ ಸಿಬ್ಬಂದಿ ಅವಿನಾಶ ಅಶೋಕ ಶೇಟ್ ವಿರುದ್ಧ ಕಾರವಾರ ಪ್ರಧಾನ ಕಚೇರಿಯ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಶ್ಯಾಮ ಬಾಂದೇಕರ್ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2025 ರ ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಒಟ್ಟು ನಾಲ್ವರು ಗ್ರಾಹಕರು ಅಡವಿಟ್ಟ 8,80 ಲಕ್ಷ ರೂ. ಸಾಲಕ್ಕೆ ಸಂಬಂಧಿಸಿದ 208.900 ಗ್ರಾಂ ಬಂಗಾರವನ್ನು ಹಾಗೂ, ಇನ್ನಿಬ್ಬರು ಗ್ರಾಹಕರು ತಮ್ಮ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ನೀಡಿದ್ದ 50 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದಾಶಿವಗಡ ಜೈ ದುರ್ಗಾ ಮಾತಾ ಸೌಹಾರ್ದ ಸೊಸೈಟಿ, ಕಾರವಾರ ಅರ್ಬನ್ ಬ್ಯಾಂಕ್,ಸದಾಶಿವಗಡ ಆಶ್ರಯ ಸೊಸೈಟಿಗಳಲ್ಲಿ ಅವ್ಯವಹಾರ ನಡೆದು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಮತ್ತೊಂದು ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ ಕಂಡುಬಂದಿದೆ. ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.