- ಉತ್ತರ ಕನ್ನಡದ ವಿವಿಧೆಡೆ ನೆರೆ, ಬರ ಪರಿಸ್ಥಿತಿ ಅಧ್ಯಯನ
- ಕರಾವಳಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮಿನಿಸ್ಟರ್
ನೆರೆ, ಬರ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ಮುಖ್ಯಮಂತ್ರಿಗಳು ನನ್ನನ್ನು ಕಳಿಸಿದ್ದಾರೆ. ಎಲ್ಲೆಡೆ ಪ್ರವಾಸ ಮಾಡಿ, ಶಾಸಕರ ಜೊತೆ ಮಾತನಾಡಿ ವರದಿಯನ್ನು ಸಿಎಂ ಅವರಿಗೆ ನೀಡುತ್ತೇನೆ. ಸರ್ಕಾರ ಸೂಕ್ತ ಪರಿಹಾರವನ್ನು ನೀಡುತ್ತದೆ. ನಾನು ಶಾರ್ಟ್ ಟರ್ಮ್ಗಾಗಿ ಇಲ್ಲಿಗೆ ಬಂದಿದ್ದು, ಅದಿಷ್ಟೇ ಮಾಡ್ತೇನೆ. ಮುಂದೆ ಸಿಎಂ ಅವರು ಯಾವ ಜಿಲ್ಲೆಯ ಉಸ್ತುವಾರಿ ಕೊಟ್ಟರೂ ನಿಭಾಯಿಸ್ತೇನೆ. ಉತ್ತರ ಕನ್ನಡ ಉಸ್ತುವಾರಿ ಕೊಟ್ಟರೆ ಎಲ್ಲವನ್ನೂ ಅಧ್ಯಯನ ಮಾಡಿ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ಸಂಚಾರ ಮಾಡಿದ ಅವರು ಹಾರವಾಡ ಕಡಲ ಕೊರೆತ, ಶಿರೂರು ಗುಡ್ಡ ಕುಸಿತ, ಕಾಳಿ ಸೇತುವೆ ಕುಸಿತಗಳ ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶಾಸಕರ ಜೊತೆ ಚರ್ಚಿಸಿದರು. ಅದಕ್ಕೂ ಪೂರ್ವದಲ್ಲಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಅಡಕೆ ಎಲೆ ಚುಕ್ಕಿ, ಕೊಳೆ ರೋಗದ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಯತ್ನಿಸಲಾಗುವುದು, ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ ನೀಡಲು ಯತ್ನಿಸಲಾಗುವುದು ಭರವಸೆ ನೀಡಿದರು.
ಕಡಲ ಕೊರೆತ ತಡೆಗೆ ವೈಜ್ಞಾನಿಕ ಅಧ್ಯಯನ ನಡೆಸಿ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಕಾರವಾರ ಶಾಸಕ ಸತೀಶ ಸೈಲ್, ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ದುರಸ್ತಿಗೊಳಿಸುವ ಕಾರ್ಯ ಆಗಬೇಕಿದೆ, ಕೈಗಾ ರಸ್ತೆ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು ತಕ್ಷಣದಲ್ಲಿ ದುರಸ್ತಿಯಾಗಬೇಕಿದೆ ಎಂದು ಒತ್ತಾಯಿಸಿದರು.
ಶಿರಸಿ -ಸಿದ್ದಾಪುರ ಶಾಸಕ ಭೀಮಣ್ಣ ಟಿ ನಾಯ್ಕ, ಮಾತನಾಡಿ, ಶಿರಸಿ ಭಾಗದಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಶಿರಸಿ-ಹಾವೇರಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ, ಅಡಿಕೆ ಕೊಳೆರೋಗ ವ್ಯಾಪಕವಾಗಿದ್ದು ಇದಕ್ಕೆ ಸೂಕ್ತ ಔಷಽ ಕಂಡುಹಿಡಿದು ರೋಗಕ್ಕೆ ಪರಿಹಾರ ನೀಡಬೇಕಿದೆ. ಮನೆ ಹಾನಿ ಸಂದರ್ಭದಲ್ಲಿ ಸಂತ್ರಸ್ಥರಿಗೆ ಗರಿಷ್ಠ ಪ್ರಮಾಣದ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು. ಎಂಎಲ್‌ಸಿ ಗಣಪತಿ ಉಳ್ವೇಕರ್, ಹಾರವಾಡದಲ್ಲಿನ ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲ್ಲಿ ಯಲ್ಲಾಪುರ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್, ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಜಿಪಂ ಸಿಇಒ ಡಾ.ದಿಲೀಶ್ ಶಶಿ, ಅಪರ ಜಿಲ್ಲಾಽಕಾರಿ ಸಾಜಿದ್ ಮುಲ್ಲಾ ಇದ್ದರು.