ಅಂಗವಿಕಲರಿಗೆ ಮಂಕಾಳ ವೈದ್ಯ ಅವರು ತ್ರಿಚಕ್ರ ವಾಹನ ವಿತರಿಸಿದರು.
ಕಾರವಾರ: ಪಿಎಂಶ್ರೀ ಶಾಲೆಗೋಸ್ಕರ ಪಕ್ಕದ ಶಾಲೆಗಳ ಮಕ್ಕಳನ್ನು ಸ್ಥಳಾಂತರ ಮಾಡುವ ಅಥವಾ ಕಿಪ್ರಾ ಶಾಲೆಗಳನ್ನು ವಿಲೀನ ಮಾಡುವ ಮೊದಲು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿ ಎಂದು ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರವಾರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಚಿವ ಮಂಕಾಳ ವೈದ್ಯ ಅವರು ತ್ರೈ ಮಾಸಿಕ ಕೆಡಿಪಿ ಸಭೆ ನಡೆಸಿದರು. ಅದಕ್ಕೂ ಪೂರ್ವದಲ್ಲಿ ಅವರು ಅಂಗವಿಕಲರಿಗೆ ಗ್ರಾಸಿಂ ನೀಡಿದ ಎರಡು ವಾಹನಗಳನ್ನು ವಿತರಿಸಿದರು.
ಅಂಕೋಲಾದಲ್ಲಿ ಅವರ್ಸಾ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದು, ಅದರ ಜಾರಿಯಾಗಿ ಬೇರೆ ಶಾಲೆಯ ಮಕ್ಕಳನ್ನು ಸ್ಥಳಾಮತರಿಸುತ್ತಿರುವ ಬಗ್ಗೆ ಶಾಸಕ ಸತೀಶ ಸೈಲ್ ಆಕ್ಷೇಪಿಸಿದರು. ಸಚಿವ ಮಂಕಾಳ ವೈದ್ಯ ಕೂಡ ಅದಕ್ಕೆ ದನಿಗೂಡಿಸಿ ಪಿಎಂಶ್ರೀ ಶಾಲೆಗಳಲ್ಲಿ ಅಷ್ಟು ಕೊಠಡಿಗಳಿವೆಯಾ, ಶಿಕ್ಷಕರಿದ್ದಾರಾ ಎಂಬುದನ್ನೂ ಯೋಜಿಸಿ ಎಂದರು.
ರಸ್ತೆ ಬಂದ್ ಮಾಡಿ ಪ್ರತಿಭಟನೆ
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766ಇ ವಿಸ್ತರಣೆ ನೆಪದಲ್ಲಿ ಸವಾರರಿಗೆ ತೊಂದರೆ ನೀಡಲಾಗುತ್ತಿದೆ. ಒಟ್ಟು 8 ಕಿಮೀ ರಸ್ತೆ ಕಿತ್ತು ಹಾಕಿದ್ದು, ಕಾಂಕ್ರಿಟ್ ಹಾಕುವ ಕಾಮಗಾರಿ ನಿಧಾನವಾಗಿ ಸಾಗಿದೆ. ರಸ್ತೆ ಧೂಳುಮಯವಾಗಿದೆ. ಮಳೆ ಬಂದು ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಶಿರಸಿ ಜಾತ್ರೆ ಇರುವ ಕಾರಣ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಸಂಘಟನೆಗಳು ಪ್ರತಿಭಟನೆ ಮಾಡಲು ಮುಂದಾಗಿದ್ದವು. ನಾನು ತಡೆದಿದ್ದೇನೆ. ಶೀಘ್ರ ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಿಕೊಡದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಭೀಮಣ್ಣ ನಾಯ್ಕ ಆಕ್ಷೇಪಿಸಿದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ಶಿರಸಿ-ಕುಮಟಾ ರಸ್ತೆ ಕಾಮಗಾರಿ ಶುರುವಾಗಿ ಐದು ವರ್ಷವಾಗುತ್ತ ಬಂದಿದೆ. ಗುತ್ತಿಗೆ ನಿಯಮದಂತೆ 2024 ರಲ್ಲೇ ಕಾಮಗಾರಿ ಮುಗಿಯಬೇಕಿತ್ತು. 2026 ಆದರೂ ಮುಗಿದಿಲ್ಲ. ಈ ಮೇ ಒಳಗೆ ಕಾಮಗಾರಿ ಮುಗಿಸದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ಟೆಂಡರ್ ಅವಽ ಮುಂದುವರಿಸಬೇಡಿ ಎಂದು ಎಚ್ಚರಿಸಿದರು. ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್.ಇದ್ದರು.
ಪ್ರಮುಖ ನಿರ್ಣಯಗಳು
- ಶಾಸಕ ಭೀಮಣ್ಣ ನಾಯ್ಕ ಅವರ ಪ್ರಸ್ತಾವನೆಯನ್ನು ಪುರಸ್ಕರಿಸಿ. ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡದಂತೆ ತ್ರೈ ಮಾಸಿಕ ಕೆಡಪಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯವನ್ನು ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.
- ಅರಣ್ಯ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆಯಿಂದ ಈ ಹಿಂದೆ ಜಿಪಿಎಸ್ ಆದವರ ಹೆಸರು ಕೈಬಿಟ್ಟು ಹೋಗಿ, ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಶಾಸಕ ಭೀಮಣ್ಣ ನಾಯ್ಕ ಪ್ರಸ್ತಾವನೆ ಮಂಡಿಸಿದರು. ಸಚಿವ ಮಂಕಾಳ ವೈದ್ಯ ಅದಕ್ಕೆ ಸಮ್ಮತಿ ಸೂಚಿಸಿದರು. ಈ ಹಿಂದೆ ಜಿಪಿಎಸ್ ಮಾಡುವಾಗ ಬಿಟ್ಟು ಹೋದವರ ಹೆಸರುಗಳನ್ನೂ ಈಗ ಪರಿಗಣಿಸುವಂತೆ ಆದೇಶಿಸಿದರು.
- ಜೂನ್ 1 ರಿಂದ ಶಾಲೆಗಳು ಪುನರಾರಂಭವಾಗುತ್ತಿವೆ. ತಕ್ಷಣ ಹಾಸ್ಟೆಲ್‌ಗಳೂ ಶುರುವಾಗಬೇಕು. ಯಾವುದೇ ಮಕ್ಕಳು ಹಾಸ್ಟೆಲ್ ಸಿಕ್ಕಿಲ್ಲ ಎಂದು ವಾಪಸಾಗುವಂತಾಗಬಾರದು ಎಂದು ಸಚಿವ ಮಂಕಾಳ ವೈದ್ಯ ಸೂಚಿಸಿದರು.
- ಸುಳಿ ಮುರ್ಕಿ ಕೊಲೆ ಪ್ರಕರಣದಲ್ಲಿ ತೊಂದರೆಗೊಳಗಾದವರ ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆದೇಶ ಮಾಡಿದರು.