ಶಿರಸಿಯಲ್ಲಿ ಔಷಧ (medicine) ಅಂಗಡಿ ಮಾಲೀಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜತೆ ಚರ್ಚೆ ನಡೆಸಿದರು.
ಶಿರಸಿ: ಆನ್‌ಲೈನ್ ಔಷಧ( medicine )ವ್ಯಾಪಾರವನ್ನು ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಪ್ರತಿಭಟನೆಗೆ ಮುಂದಾಗಿದೆ. ರಾಜ್ಯ ಸಂಘದ ಕರೆಯ ಮೇರೆಗೆ ಮೇ 20ರಂದು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಔಷಧ ಅಂಗಡಿ ಮಾಲೀಕರು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿದರು.
ಔಷಧ ವ್ಯಾಪಾರಸ್ಥರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಂಸದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಇದಕ್ಕೂ ಮುನ್ನ ಶನಿವಾರ ಔಷಧ ವ್ಯಾಪಾರಸ್ಥರ ಸಂಘದ ಸಭೆಯಲ್ಲಿ ಮಾತನಾಡಿದ ಶಿರಸಿ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣೇಶ ಹೆಗಡೆ, ಮೇ 20ರಂದು ನಡೆಯಲಿರುವ ಬಂದ್ ಅನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ಔಷಧ ವ್ಯಾಪಾರಸ್ಥರು ಕಡ್ಡಾಯವಾಗಿ ಭಾಗವಹಿಸಿ ಸಹಕರಿಸುವಂತೆ ಮನವಿ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಹೆಗಡೆ ಹಾಗೂ ಇತರ ಸದಸ್ಯರಿದ್ದರು.