ಸಿದ್ದಾಪುರ ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ ಜಿಲ್ಲಾ ರಂಗೋತ್ಸವದಲ್ಲಿ ಕಿರಣ ಭಟ್ಟ ಮಾತನಾಡಿದರು. ಗೋಪಾಲ ಹೆಗಡೆ, ಗಣಪತಿ ಹೆಗಡೆ ಹುಲಿಮನೆ ಉಪಸ್ಥಿತರಿದ್ದರು.
ಸಿದ್ದಾಪುರ: ರಂಗಭೂಮಿ ಮತ್ತು ಪ್ರೇಕ್ಷಕರ ನಡುವಿನ ಸಂಬಂಧ ಉತ್ತಮವಾಗಿರಬೇಕು. ಸತ್ಯವನ್ನು ರಂಗಭೂಮಿ ಮೂಲಕ ಪ್ರಸುತಪಡಿಸಬೇಕು. ರಂಗಭೂಮಿಯ ಜತೆ ಸಮುದಾಯ ನಿಲ್ಲಬೇಕು ಎಂದು ಹಿರಿಯ ರಂಗಕರ್ಮಿ ಕಿರಣ ಭಟ್ಟ ಹೊನ್ನಾವರ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ರಂಗ ಸೌಗಂಧ ಸಿದ್ದಾಪುರ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹುಲಿಮನೆ ಸೀತಾರಾಮ ಶಾಸ್ತ್ರಿ ನೆನಪಿನಲ್ಲಿ ಆಯೋಜಿಸಿರುವ ಮೂರುದಿನಗಳ ಜಿಲ್ಲಾ ರಂಗೋತ್ಸವದ ಎರಡನೇ ದಿನದ ಸಭಾಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.
ರಂಗವಿಮರ್ಶಕ ಗೋಪಾಲ ಹೆಗಡೆ ಹುಲಿಮನೆ ಮಾತನಾಡಿ, ಸೀತಾರಾಮ ಶಾಸ್ತ್ರಿಗಳ ಒಡನಾಟ ನೆನಪಿಸಿಕೊಳ್ಳುತ್ತ ಮರಾಠಿ ರಂಗಭೂಮಿಯಲ್ಲಿ ಪ್ರಸಿದ್ಧವಾಗಿದ್ದ ಸಂಗೀತ ನಾಟಕಗಳ ಪ್ರದರ್ಶನವನ್ನು ಕನ್ನಡದಲ್ಲಿ ಆರಂಭಿಸಿದ್ದು ಆದ್ಯ ರಂಗಾಚಾರ್ಯ ವರದಾಚಾಚಾರ್ಯರು. ಬಹುತೇಕ ವೃತ್ತಿರಂಗಭೂಮಿಯಲ್ಲಿ ಸಂಗೀತ ನಾಟಕಗಳ ಪ್ರದರ್ಶನ ಹೆಚ್ಚು.ವೈಚಾರಿಕತೆ, ಉತ್ಕೃಷ್ಟ ಸಾಹಿತ್ಯವನ್ನು ಒಳಗೊಂಡ ವೃತ್ತಿರಂಗಭೂಮಿಗೆ ಭಿನ್ನವಾದ ನಾಟಕಗಳನ್ನು ಆಧುನಿಕ ರಂಗಭೂಮಿ ಪ್ರದರ್ಶಿಸುತ್ತಿದೆ ಎಂದರು.
ರಂಗಸೌಗಂಧ ತಂಡದ ಅಧ್ಯಕ್ಷ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ನಾಗಪತಿ ವಡ್ಡಿನಗದ್ದೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು. ನಂತರ ಸಾಗರದ ಸ್ಪಂದನ ತಂಡದವರಿಂದ ಪ್ರಾಣ ಪದ್ಮಿನಿ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.