ಸಹಕಾರಿ ಸಪ್ತಾಹದ ಅಂಗವಾಗಿ ಶಿರಸಿಯ ಟಿಎಂಎಸ್‌ನಲ್ಲಿ ಹಿರಿಯ ರೈತರನ್ನು ಸನ್ಮಾನಿಸಲಾಯಿತು. ಶಾಸಕ ಭೀಮಣ್ಣ ನಾಯ್ಕ, ಜಿ. ಎಂ. ಹೆಗಡೆ ಹುಳಗೋಳ, ಜಿ.ಟಿ. ಹೆಗಡೆ, ಕಾವ್ಯಾರಾಣಿ, ಅಜಿತ ಶಿರಹಟ್ಟಿ ಇತರರಿದ್ದರು. 
ಉತ್ತರ ಕನ್ನಡ

ಉತ್ತಮವಾಗಿ ಬೆಳೆಯಲಿ ಸಹಕಾರಿ (cooperative sociaty) ಸಂಘ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಣ್ಣ ನಾಯ್ಕ ಆಶಯ
  • ಸದಸ್ಯರು, ಖರೀದಿದಾರರು, ವಿಶೇಷ ಸಾಧಕರಿಗೆ ಸನ್ಮಾನ
  • ಸಂಘ ಹುಟ್ಟು ಹಾಕುವುದು ಸುಲಭವಲ್ಲ.
ಶಿರಸಿ: ಸಹಕಾರಿ ಸಂಘವನ್ನು ಹುಟ್ಟು ಹಾಕುವುದು ಸುಲಭವಲ್ಲ. ರೈತರಿಗೆ ಆರ್ಥಿಕ ಶಕ್ತಿಯನ್ನು ನೀಡುವ ಉದ್ದೇಶದೊಂದಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರಿ ಸಂಘ (cooperative sociaty) ಗಳನ್ನು ನಮ್ಮ ಹಿರಿಯರು ಆರಂಭಿಸಿದ್ದು, ಸ್ವಾತಂತ್ರ್ಯ ಹೋರಾಟದಲ್ಲೂ ಸಹಕಾರಿಗಳ ಕೊಡುಗೆ ಅಪಾರವಾಗಿದೆ. ಸಹಕಾರಿ ಸಂಘಗಳ ಉತ್ತಮವಾಗಿ ಬೆಳೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ 72ನೇ ಸಹಕಾರ ಸಪ್ತಾಹ ಆಚರಣೆ ಹಾಗೂ ಸಂಘದ ಸದಸ್ಯರು, ಖರೀದಿದಾರರು ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲೆ ಚುಕ್ಕೆ ಹಾಗೂ ಹಳದಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಸಹಕಾರಿ ಸಂಘಗಳಿಂದ ಆಗುತ್ತಿದೆ. ಸಹಕಾರಿ ವ್ಯವಸ್ಥೆಗೆ ಚುನಾಯಿತ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದು ಎಂದರು.
ಸೊಪ್ಪಿನ ಬೆಟ್ಟವನ್ನು ನಾವು ಅನೇಕ ವರ್ಷಗಳಿಂದ ಬಳಕೆ ಮಾಡಿಕೊಂಡು ಬಂದಿದ್ದರೂ ಭಾಗಾಯತದಾರರಿಗೆ ನೀಡಿದ ಬೆಟ್ಟ ಇಂದು ಬ ಕರಾಬ್ ಎಂದು ಪರಿಗಣಿತವಾಗಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಬೆಟ್ಟ ಬಳಕೆದಾರರು ಹೋರಾಟ ಮಾಡುವ ಅವಶ್ಯಕತೆ ಇದೆ. ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲಿದ್ದೇನೆ. ಭಾಗಾಯತದಾರರಿಗೆ ಅನ್ಯಾಯವಾಗಬಾರದು ಎಂದರು.
ಟಿಎಂಎಸ್ ಸಂಸ್ಥೆ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಜನಾಂಗಕ್ಕೆ ಸಹಕಾರ ವ್ಯವಸ್ಥೆಯ ಕಲ್ಪನೆಯನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಹಾಗಾಗಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಒಂದು ಪಾಠವಾದರೂ ಸಹಕಾರ ತತ್ವಗಳ ಬಗ್ಗೆ ಇರಬೇಕು ಎಂದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಜಿ.ಎಂ ಹೆಗಡೆ ಹುಳಗೊಳ , ಉಪವಿಭಾಗಾಧಿಕಾರಿ ಕಾವ್ಯರಾಣಿ, ಚಾರ್ಟೆಡ್ ಅಕೌಂಟೆಂಟ್ ಪ್ರಕಾಶ ಹೆಗಡೆ ಹುಳಗೋಳ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿ.ಎಚ್. ಮೋಹನ, ವ್ಯವಸ್ಥಾಪಕ ವಿನಯ ಹೆಗಡೆ, ಇತರರಿದ್ದರು.
ಉಪಾಧ್ಯಕ್ಷ ಜಿ.ಎಂ ಹೆಗಡೆ ಮುಳಖಂಡ, ರಶ್ಮಿ ಹೆಗಡೆ ಹಾಗೂ ಗಿರಿಧರ ಕಿಬ್ನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಸಾಧಕರಿಗೆ ಸಮ್ಮಾನ

ರೈತರು, ಖ್ಯಾತ ಮುಳುಗು ತಜ್ಞ ಗೋಪಾಲ ನಾರಾಯಣ ಗೌಡ ಹಿರೇಕಳವೆ, ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪುರಸ್ಕೃತ ಪ್ರಸಾದ ಹೆಗಡೆ ಹುಳಗೋಳ ಹಾಗೂ ಭಾರತೀಯ ಸೇನೆಯ ವೈದ್ಯಕೀಯ ಸೇವೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಡಾ. ರಶ್ಮಿ ಹೆಗಡೆ ಅವರ ಕುಟುಂಬದವರು ಮತ್ತು ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಪ್ರಶಸ್ತಿ ಪುರಸ್ಕೃತೆ ತುಳಸಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಂಘದ ಹಲವು ಸದಸ್ಯರು ಹಾಗೂ ಖರೀದಿದಾರನನ್ನು ಗೌರವಿಸಲಾಯಿತು.