ಶಿಕ್ಷಕರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು.
- ಕಾರವಾರದಲ್ಲಿ ಶಿಕ್ಷಕರ ಬೃಹತ್ ಪ್ರತಿಭಟನೆ
- ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ
ಕಾರವಾರ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿ ಒಟ್ಟು 20 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹಿಂದೂ ಹೈಸ್ಕೂಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಎಸ್‌ಎಸ್‌ಎಲ್‌ಸಿಯಲ್ಲಿ ಗುಣಮಟ್ಟದ ಫಲಿತಾಂಶ ಬಯಸುತ್ತದೆ. ಆದರೆ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಸರ್ಕಾರದ ಮಲತಾಯಿ ಧೋರಣೆಯಿಂದ ಅನುದಾನಿತ ಶಾಲೆಗಳು ಬಳಲುತ್ತಿವೆ. ಅವುಗಳನ್ನು ಉಳಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಬೇಡಿಕೆಗಳು:
2015ರ ನಂತರ ಖಾಲಿಯಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.ಮುಂದಿನ ದಿನದಲ್ಲಿ ಹುದ್ದೆ ಖಾಲಿಯಾದ ದಿನದಿಂದಲೇ ಭರ್ತಿ ಮಾಡಲು ಕ್ರಮ ವಹಿಸಬೇಕು. ಭರ್ತಿಯಾಗುವವರೆಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು. ಗುಡ್ಡಗಾಡು, ಕರಾವಳಿ, ಗಡಿನಾಡು, ಮಲೆನಾಡು ಪ್ರದೇಶಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು 1:15 ಕ್ಕೆ ಇಳಿಸಬೇಕು. 2006ರ ನಂತರ ನೇಮಕಗೊಂಡು ನಿವೃತ್ತರಾದ ಅನುದಾನಿತ ಶಾಲಾ ಶಿಕ್ಷಕರಿಗೆ ಪಿಂಚಣಿ ನೀಡಬೇಕು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರಿಗೂ ಒಂದೇ ಆದೇಶದಲ್ಲಿ ನೀಡಬೇಕು. ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆಗಳಿಗೆ ವೇತನಾನುದಾನ ಮಂಜೂರು ಮಾಡಬೇಕು. ಶೇ.100 ಫಲಿತಾಂಶ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಸರ್ಕಾರಿ ಶಾಲೆಗಳಂತೆ ಗೌರವ ಸಂಭಾವನೆ ನೀಡಬೇಕು.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯವನ್ನು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳಿಗೂ ನೀಡಬೇಖು. ಸ್ಯಾಟ್ಸ್, ಯೂಡೈಸ್ ಅಪ್ಡೇಟ್ ಶುಲ್ಕವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಎಸ್‌ಎಸ್‌ಎಲ್‌ಸಿ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುದ್ರಣ ಶುಲ್ಕ, ಶಾಲಾ ನಿರ್ವಹಣಾ ಶುಲ್ಕವನ್ನು ಶಾಲೆಗಳಿಗೆ ನೀಡಬೇಕು. ಅನುದಾನಿತ ಶಾಲೆಯ 3 ಕಿಮೀ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಮಾಡಬಾರದು. ಅನುದಾನಿತ ಶಾಲೆಗಳಿಗೂ ದ್ವಿಭಾಷಾ ನೀತಿ ವಿಸ್ತರಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಪಟ್ಟಿ ಸಲ್ಲಿಸಿದರು.
ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ್, ಕಾರ್ಯದರ್ಶಿ ಎಲ್.ಎಂ.ಹೆಗಡೆ, ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ, ಗಣೇಶ ಬಿಷ್ಟಣ್ಣನವರ, ಅಂಕೋಲಾ ಘಟಕದ ಗಣಪತಿ ನಾಯಕ, ಎಂಡಿ ಕುಂಶಿ,ಸಂದೀಪ್ ರಾಣೆ, ಕಾರವಾರದ ಆರ್. ವಿ. ದೇಶಬಂಡಾರಿ,ಶಮಿAದ್ರ ನಾಯಕ, ಸಂಜಯ ನಾಯ್ಕ, ಮಹದೇವ ರಾಣೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.