ಶಿರಸಿಯ ಶ್ರೀ ಮಾರಿಕಾಂಬಾ ದೇವಿ (marikambe) ಜಾತ್ರಾ ಶೋಭಾ ಯಾತ್ರೆ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ನಡೆಯಿತು.
- ಶಿರಸಿಯಲ್ಲಿ ಮುಗಿಲುಮುಟ್ಟಿದ ಭಕ್ತರ ಜಯಘೋಷ
- ನಾಡಿನ ಗಮನಸೆಳೆದ ರಾಜ್ಯದ ಅತಿ ದೊಡ್ಡ ಜಾತ್ರೆ
- ಭೂತರಾಜನಿಗೆ, 32 ಗಡಿಗಳಲ್ಲಿ ಸಾತ್ವಿಕ ಬಲಿ ಸಮರ್ಪಣೆ
- ರಥಾರೋಹಣ ಆರಂಭವಾಗುತ್ತಿದ್ದಂತೆ ಭಕ್ತರ ಮೈಯಲ್ಲಿ ದೇವಿ ಆವಾಹನೆ
- ದೇವಾಲಯದಲ್ಲಿ ಮನಸೂರೆಗೊಂಡ ಮಾರಿಕಾಂಬೆಯ ಕಲ್ಯಾಣ ಮಹೋತ್ಸವ
- ಡೊಳ್ಳು ವಾದ್ಯ, ಕೋಲಾಟ, ಕಹಳೆ, ಯಕ್ಷಗಾನ, ಗೊಂಬೆಯಾಟದ ವೈಭವ
ಶಿರಸಿ: ಭಕ್ತರ ಜಯಘೋಷ, ತಾಯಿ ಮಾರಿಕಾಂಬೆಯಲ್ಲಿ (marikambe) ಶರಣಾಗತಿಯ ಭಾವುಕತೆಯೊಂದಿಗೆ ರಾಜ್ಯದ ಅತಿ ದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಬುಧವಾರ ಬೃಹತ್ ರಥೋತ್ಸವದ ಮೂಲಕ ಆರಂಭಗೊಂಡಿತು.
ಬುಧವಾರ ಬೆಳಗ್ಗೆ 7.27ರಿಂದ ಜಾತ್ರಾ ರಥೋತ್ಸವದ ವಿಧಿ ವಿಧಾನಗಳು ಆರಂಭಗೊಂಡವು. ಬೆಳಗ್ಗೆ ದೇವಾಲಯದ ಎದುರಿನಲ್ಲಿರುವ ಭೂತರಾಜನಿಗೆ ಸಾತ್ವಿಕ ಬಲಿ ಸಮರ್ಪಿಸಲಾಯಿತು. ರಥದ ಗಾಲಿಗಳಿಗೆ ಪ್ರತಿಷ್ಠಿತರಿಂದ, ಬಾಬುದಾರರಿಂದ ತೆಂಗಿನ ಕಾಯಿ ಸಮರ್ಪಣೆ ಕಾರ್ಯಕ್ರಮಗಳು ನಡೆದವು. ಕಾಯಿ ಒಡೆದಾದ ಮೇಲೆ ಪೂಜಾರಿಗಳು ನೈವೇದ್ಯದ ಎಡೆಯನ್ನು ಅಸಾದಿಗಳಿಗೆ ಸಮರ್ಪಿಸಿದರು. ಆ ಬಳಿಕ ಸುಮಾರು 9.07 ಗಂಟೆಯ ವೇಳೆ ದೇವಿಯ ರಥೋತ್ಸವ ಆರಂಭಗೊಂಡಿತು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ತಾಯಿ ಮಾರಿಕಾಂಬೆ ರಥಾರೋಹಣಗೊಳ್ಳುತ್ತಿದ್ದಂತೆಯೇ ಭಾವುಕರಾದರು. ರಥಕ್ಕೆ ಬಾಳೆ ಹಣ್ಣು, ಕೋಳಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥ ಎಳೆಯುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅನೇಕ ಭಕ್ತರಲ್ಲಿ ದೇವಿ ಆವಾಹನೆಯಾಗಿ ಕೈಯಲ್ಲಿ ಸಿಂಗಾರ ಹಿಡಿದು ನರ್ತನ ಮಾಡಿದರು. ಡೊಳ್ಳು ವಾದ್ಯ, ಕೋಲಾಟ, ಕಹಳೆ, ಯಕ್ಷಗಾನ, ಗೊಂಬೆಯಾಟ, ವಾದ್ಯ ವೃಂದಗಳ ಮೆರವಣಿಗೆ ನಡೆಯಿತು. ದೇವಿಯ ರಥೋತ್ಸವದ ಸೌಂದರ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ಮಧ್ಯಾಹ್ನ 12.30ರ ಸುಮಾರಿಗೆ ದೇವಿಯ ರಥೋತ್ಸವ ಜಾತ್ರಾ ಗದ್ದುಗೆಯ ಸಮೀಪ ಬಂತು. ಬಳಿಕ ಮೇಟಿ ದೀಪದವರನ್ನು, ಗಾಳಿಮಾರಿ ಜೋಗುತಿಯರನ್ನೂ ಅವರ ಮನೆಗೆ ಹೋಗಿ ಕರೆತರಲಾಯಿತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದೇವಿಯನ್ನು ರಥದಿಂದ ಇಳಿಸಿ ಜಾತ್ರಾ ಗದ್ದುಗೆಯ ಮೇಲೆ ಕೂಡಿಸುವ ಕಾರ್ಯಕ್ರಮ ನಡೆಯಿತು. ಸರ್ವಾಲಂಕಾರ ಭೂಷಿತೆ ತಾಯಿ ಮಾರಿಕಾಂಬೆ ಗದ್ದುಗೆಯಲ್ಲಿ ಆಸೀನಳಾದ ಬಳಿಕ ಮೇಟಿ ದೀಪವನ್ನು ಚಪ್ಪರದ ನಡುವೆ ಇಡಲಾಯಿತು. ಆಸಾದಿಯವರು ರಂಗ ವಿಧಾನಗಳನ್ನು ಪೂರೈಸಿದರು. ರಾತ್ರಿ ಶಿರಸಿ ಸುತ್ತಮುತ್ತಲಿನ 32 ಗಡಿಗಳಲ್ಲಿ ಸಾತ್ವಿಕ ಬಲಿ ಸಮರ್ಪಿಸಲಾಯಿತು.
ತಾಯಿ ಮಾರಿಕಾಂಬೆ ಗುರುವಾರ ಬೆಳಗ್ಗೆ 5 ಗಂಟೆಯಿಂದ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ದೇವಿಯ ಹಣ್ಣು ಕಾಯಿ, ಉಡಿ ಸೇವೆಗಳು ಆರಂಭಗೊಳ್ಳಲಿವೆ. ಮಾ.4ರ ಬೆಳಗ್ಗೆ 10.47ರವರೆಗೂ ತಾಯಿ ಮಾರಿಕಾಂಬೆ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾಳೆ.
ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳಾದ ಶಿವಾನಂದ ಶೆಟ್ಟಿ, ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು. ಶಾಸಕ ಭೀಮಣ್ಣ ನಾಯ್ಕ ಸಾಂಪ್ರದಾಯಿಕ ಧಿರಿಸಿನೊಂದಿಗೆ ಆಗಮಿಸಿ ರಥ ಎಳೆಯುವ ಮೂಲಕ ಪಾಲ್ಗೊಂಡರು. ಮಾರಿಕಾಂಬಾ ದೇವಿಯ ರಥೋತ್ಸವದ ವೇಳೆ ರಾಜ್ಯದ ಮೂಲೆ ಮೂಲೆಯಿಂದಲೂ ಸಾವಿರಾರು ಭಕ್ತರು ಸೇರಿದ್ದರು.
ಕಲ್ಯಾಣ ಮಹೋತ್ಸವ
ಮಾರಿಕಾಂಬಾ ದೇವಿ ಜಾತ್ರೆಯ ವಿಧಿ ವಿಧಾನವಾದ ಮಾರಿಕಾಂಬೆಯ ಕಲ್ಯಾಣ ಮಹೋತ್ಸವ ಮಂಗಳವಾರ ರಾತ್ರಿ ದೇವಾಲಯದ ಆವರಣದಲ್ಲಿ ನಡೆಯಿತು. ಮಾರಿಕಾಂಬಾ ದೇವಿಯನ್ನು ಮರ್ಕಿ ದುರ್ಗಿ ದೇವತೆಗಳೊಂದಿಗೆ ದೆವಾಲಯದ ಸಭಾ ಮಂಟಪದಲ್ಲಿ ಕೂಡ್ರಿಸಲಾಯಿತು. ಮಾರಿಕಾಂಬೆಗೆ ಮತ್ತು ಮರ್ಕಿ ದುರ್ಗಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಭರಣಗಳನ್ನು ತೊಡಿಸಿ ಅಲಂಕರಿಸಿ ದೃಷ್ಟಿ ಇಡಲಾಯಿತು. ಬಳಿಕ ಕುಂಬಳಕಾಯಿಯ ಸಾತ್ವಿಕ ಬಲಿ ನೀಡಿ, ದೇವಿಯ ಮಂಗಳಸೂತ್ರವನ್ನು ಬಾಬುದಾರರ ಮನೆಯಿಂದ ಮೆರವಣಿಗೆಯಲ್ಲಿ ತಂದು ಮೊದಲ ಪ್ರತಿಷ್ಠೆಯ ಪೂಜೆ ನಾಡಿಗರ ಮನೆಯಲ್ಲಿ ನಡೆಯಿತು. ದೇವಿಯ ಕಲ್ಯಾಣ ಪ್ರತಿಷ್ಠೆ ಪೂರ್ಣಗೊಂಡ ಬಳಿಕ ನಾಡಿಗರಿಂದ ಮೊದಲ ಪೂಜೆ ನೆರವೇರಿತು. ಬಳಿಕ ಕುಂಬಾರ, ಕೇದಾರ ಮನೆತನದವರಿಂದ ಪೂಜೆಗಳು ನಡೆದವು. ಇದಾದ ಬಳಿಕ ಮರ್ಕಿ ದುರ್ಗಿ ದೇವರನ್ನು ದೇವಸ್ಥಾನಕ್ಕೆ ಕರೆದೊಯ್ದು ಪ್ರತಿಷ್ಠಾಪಿಸಲಾಯಿತು.
ಭಕ್ತರಿಂದ ಪ್ರಸಾದ ಸ್ವೀಕಾರ
ಜಾತ್ರೆಗೆ ಬರುವ ಭಕ್ತರ ಸಲುವಾಗಿ ಮಾರಿಕಾಂಬಾ ದೇವಾಲಯದಿಂದ ಇಲ್ಲಿಯ ಮಾರಿಗುಡಿ ಶಾಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇದರ ಹೊರತಾಗಿ ಪಯ್ಯು ಚೌಟಿ ಅವರ ನೇತೃತ್ವದಲ್ಲಿ ಸಾರಿಕಾ ಸೇವಾ ಟ್ರಸ್ಟ್ ನಿಂದ ಅನ್ನ ಪ್ರಸಾದ ವಿತರಣೆ, ಸತ್ಯ ಸಾಯಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಸಿವೆ.