ಅಭಿನಂದನ್‌ 
ಉತ್ತರ ಕನ್ನಡ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಮಂಕಿ ಪಿಎಸ್'ಐ ಬಂಧನ

ಪ್ರಮುಖ ಮುಖ್ಯಾಂಶಗಳು

  • ಅಪ್ರಾಪ್ತೆಯನ್ನು ಲಾಡ್ಜ್ ಗೆ ಕರೆದು ಅತ್ಯಾಚಾರ
  • ಹೊನ್ನಾವರದ ಮಂಕಿ ಠಾಣೆ ಪಿಎಸ್ ಐ
ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ಎಂಬಾತನನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆಯಲ್ಲೂ ಸಂಚಲನ ಮೂಡಿಸಿದೆ.
ಜುಲೈ 4ರಂದು 16 ವರ್ಷದ ಬಾಲಕಿ ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ದೂರಿನ ಪ್ರಕಾರ, ಬಾಲಕಿ ಅಪ್ರಾಪ್ತಳಾಗಿರುವುದು ತಿಳಿದಿದ್ದರೂ ಆರೋಪಿತ ಪಿಎಸ್‌ಐ ದೂರವಾಣಿ ಕರೆ, ಚಾಟ್ ಹಾಗೂ ಹಣಕಾಸಿನ ನೆರವು ನೀಡುವ ಮೂಲಕ ಆಕೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಮೇ 31ರಂದು ಹೊನ್ನಾವರದ ಅಪ್ಪರಕೊಂಡದಲ್ಲಿ ಸಂಬಂಧಿಯ ಮಗಳ ಹುಟ್ಟುಹಬ್ಬವಿದೆ ಎಂದು ಹೇಳಿ ಬಾಲಕಿಯನ್ನು ಹೊನ್ನಾವರಕ್ಕೆ ಕರೆಸಿಕೊಂಡು, ಅಲ್ಲಿಂದ ತನ್ನ ಕಾರಿನಲ್ಲಿ ಭಟ್ಕಳಕ್ಕೆ ಕರೆತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಭಟ್ಕಳದ ರಾಯಲ್ ಓಕ್ ಲಾಡ್ಜ್ಗೆ ಸಂಜೆ ಸುಮಾರು 6.30ಕ್ಕೆ ಕರೆದುಕೊಂಡು ಹೋಗಿ, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಮುರಿದ ಕಟ್ಟೆ ವಿವಾದದ ಸಂದರ್ಭದಲ್ಲಿ ಭಟ್ಕಳದಲ್ಲಿ ಪೊಲೀಸ್ ಸಿಬ್ಬಂದಿಗೆ ರಾಯಲ್ ಓಕ್ ಲಾಡ್ಜ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯ ವೇಳೆ ಲಭ್ಯವಾದ ಕೆಲವು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಭಟ್ಕಳ ನಗರ ಠಾಣೆ ಪೊಲೀಸರು ಆರೋಪಿತ ಪಿಎಸ್‌ಐಯನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿತ ಅಭಿನಂದನ್ ಗೌಡ ಅವರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರಾಗಿದ್ದು, 2021ನೇ ಬ್ಯಾಚ್‌ನ ಪಿಎಸ್‌ಐ ಆಗಿದ್ದಾನೆ. ಕೆಲವೇ ತಿಂಗಳ ಹಿಂದೆ ಮಂಕಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಆಗಿ ವರ್ಗಾವಣೆಯಾಗಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸ್ ಅಧಿಕಾರಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಲಾಖಾ ಮಟ್ಟದಲ್ಲೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.