ಕಾರವಾರ: ಜಿಯೋಗ್ರಾಫಿಕಲ್ ಇಂಡಿಕೇಶನ್(ಜಿಐ ಟ್ಯಾಗ್) ಪಡೆದಿರುವ ಅಂಕೋಲಾ ಕರಿ ಈಶಾಡು ಮಾವು ವಿದೇಶಕ್ಕೆ ರಫ್ತಾಗುವ ಸಾಧ್ಯತೆ ಇದೆ. ಈ ಕುರಿತು ಪ್ರಯತ್ನ ನಡೆದಿದೆ.
ಬೆಂಗಳೂರು ಮೂಲದ ದೋವಿಷಾ ಎಂಬ ರಫ್ತು ಸಂಸ್ಥೆಯು ಕರಿ ಈಶಾಡನ್ನು ಯೂರೋಪಿಯನ್ ರಾಷ್ಟçಗಳಿಗೆ ಕಳಿಸಲು ಆಸಕ್ತಿ ತೋರಿದ್ದಾರೆ. ಕರಿ ಈಶಾಡಿಗೆ ಜಿಐ ಟ್ಯಾಗ್ ಪಡೆಯಲು ಪ್ರಯತ್ನ ಮಾಡಿದ ಅಂಕೋಲಾದ ಮಾಧವ ಇಂದ್ರ ಗೌಡ ಅವರ ಮೂಲಕ ಈಗ ಕರಿ ಈಶಾಡಿನ 25 ಕೆಜಿ ಮಾದರಿ (ಸ್ಯಾಂಪಲ್) ಇಟಲಿ ಪ್ರವಾಸ ಬೆಳೆಸಲಿದೆ. ಅಲ್ಲದೇ, ಪಿಜಿ ಮತ್ತು ನ್ಯೂಜಿಲ್ಯಾಂಡ್ ದೇಶಗಳಿಗೂ ಕಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಯಾಂಪಲ್‌ಗೆ ಒಪ್ಪಿಗೆ ದೊರೆತರೆ ರಫ್ತು ಪ್ರಕ್ರಿಯೆ ಪ್ರಾರಂಭವಾಗಲಿದೆ. ಇದರಿಂದ ಕರಿ ಈಶಾಡ ಮಾವಿಗೆ ಹೆಚ್ಚಿನ ಬೆಲೆ ಹಾಗೂ ಮಾನ್ಯತೆ ಲಭ್ಯವಾಗುವ ಸಾಧ್ಯತೆ ಇದೆ.
2023 ರಲ್ಲಿ ಅಂಕೋಲಾದ ಮಾತಾ ತೋಟಗಾರರ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿಯ ಮಾದರಿಗೆ ಕೇಂದ್ರ ಸರ್ಕಾರವು ಜಿಐ ಮಾನ್ಯತೆ ನೀಡಿ ಆದೇಶ ಹೊರಡಿಸಿತ್ತು. ಅದಾದ ನಂತರ ಮೊದಲ ಬಾರಿಗೆ ವಿದೇಶ ರಫ್ತಿಗೆ ಪ್ರಯತ್ನ ನಡೆದಿದೆ.
ಅಂಕೋಲಾದಲ್ಲಿ ಬೆಳೆಯುವ ಕರಿ ಈಶಾಡ ಮಾವಿಗೆ ವಿಶಿಷ್ಟ ಸ್ವಾದವಿದೆ. ಅಂಕೋಲಾದಲ್ಲಿ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಕರಿ ಈಶಾಡ ಮಾವನ್ನು ಬೆಳೆಸಲಾಗುತ್ತದೆ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆ ದಾಖಲೆಗಳೇ ಕರಿ ಈಶಾಡಿಗೆ ಜಿಐ ಟ್ಯಾಗ್ ತಂದುಕೊಡಲು ಕಾರಣವಾಗಿವೆ.
ಬ್ರಿಟಿಷರ ಕಾಲದಲ್ಲಿ ಕರಿ ಈಶಾಡು ಇಂಗ್ಲೆಂಡ್‌ಗೆ ರಫ್ತಾಗುತ್ತಿತ್ತು. ಕರಿ ಈಶಾಡ ಮಾವು 1908ನೇ ಇಸವಿಯಲ್ಲಿ ಓರಿಯಂಟಲ್ ಕೆನರಾ ಇಂಡಸ್ಟ್ರಿಯು ಕರಿ ಈಶಾಡಿನ ರಸ (ಪಲ್ಪ್) ತೆಗೆದು ಶೇಖರಿಸಿ ರಫ್ತು ಮಾಡುತ್ತಿತ್ತು. ಈ ಸಮಯದಲ್ಲಿ, ಈ ಮಾವಿನ ಉತ್ಪನ್ನಗಳು ಲಂಡನ್ ಮತ್ತು ಚೀನಾದಂತಹ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲ್ಪಟ್ಟಿದ್ದವು ಎಂಬ ದಾಖಲೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ದೇಶದೊಳಗೇ ಸಾಕಷ್ಟು ವಹಿವಾಟು ನಡೆದರೂ ವಿದೇಶಗಳಿಗೆ ರಫ್ತಾದ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ವಿದೇಶಕ್ಕೆ ವಾಣಿಜ್ಯಿಕವಾಗಿ ರಫ್ತಾಗುತ್ತಿದೆ ಎನ್ನುತ್ತಾರೆ. ಮಾಧವ ಗೌಡ ಅವರು.
ಇಳುವರಿ ಕಡಿಮೆ
ಭಾರಿ ಉಷ್ಣಾಂಶದಿಂದ ಕರಿ ಈಶಾಡ ಮಾವಿನ ಇಳುವರಿ ಕಡಿಮೆಯಾಗಿದೆ. ಆಗಾಗ ಮಳೆ ಬಿದ್ದ ಕಾರಣ ಮಾವಿನ ಬೆಳೆಯೂ ಇದುವರೆಗೂ ಸರಿಯಾಗಿ ಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.