ಹಳಿಯಾಳ ಎಪಿಎಂಸಿ ಪ್ರಾಂಗಣದಲ್ಲಿ ರೈತರು ತಾವು ಬೆಳೆದು ತಂದಿರುವ (Maize) ಮೆಕ್ಕೆಜೋಳವನ್ನು ಒಣಗಲು ಹಾಕಿರುವುದು. 
ಉತ್ತರ ಕನ್ನಡ

Maize ಇನ್ನೂ ಆರಂಭಗೊಂಡಿಲ್ಲ ಮೆಕ್ಕೆ ಜೋಳ ಖರೀದಿ ಕೇಂದ್ರ

ಉತ್ತರ ಕನ್ನಡ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಕಡಿಮೆ ಬೆಲೆಗೆ ಮಾರುವ ದುಸ್ಥಿತಿ
  • ಪ್ರತಿಭಟನೆಗೂ ಬಗ್ಗದ ಸರ್ಕಾರ
  • ಪ್ರತಿ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ
ಹಳಿಯಾಳ: ಮುಂಗಾರು ಬೆಳೆಗಳ ಕಟಾವು ಮುಗಿದಿದ್ದು ಹಿಂಗಾರು ಬಿತ್ತನೆ ಬಹುತೇಕ ಮುಗಿಯುತ್ತ ಬಂದಿದ್ದರೂ ಪಟ್ಟಣದಲ್ಲಿ ಈವರೆಗೆ ಸರ್ಕಾರ (Maize) ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿಲ್ಲ.
ಇದರಿಂದಾಗಿ ರೈತ ಸಮುದಾಯ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಅರೆ ಮಲೆನಾಡು ಪ್ರದೇಶವನ್ನೂ ಒಳಗೊಂಡಿರುವ ಹಳಿಯಾಳ ಕ್ಷೇತ್ರದಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಫಸಲು ಉತ್ತಮವಾಗಿ ಕೈ ಸೇರಿದೆ. ಆದರೆ, ನವೆಂಬರ್ ಅರ್ಧ ತಿಂಗಳೂ ಕಳೆಯುತ್ತ ಬಂದಿದ್ದರೂ ಸರ್ಕಾರ ಮಾತ್ರ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿಲ್ಲ.
ಇದು ರೈತರು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರುವ ಸ್ಥಿತಿಯನ್ನು ತಂದೊಡ್ಡಿದೆ. ಕಳೆದ ವರ್ಷ ಹಳಿಯಾಳ ಎಪಿಎಂಸಿಯಲ್ಲಿ 2 ಲಕ್ಷ 4595 ಕ್ವಿಂಟಾಲ್ ಮೆಕ್ಕೆಜೋಳ ಮಾರಾಟವಾಗಿತ್ತು. ಮಾರುಕಟ್ಟೆ ಹೊರಗಡೆ 50 ಸಾವಿರ ಕ್ವಿಂಟಾಲ್ಗಿಂತಲೂ ಹೆಚ್ಚು ವಹಿವಾಟು ನಡೆದು ಪ್ರತಿ ಕ್ವಿಂಟಾಲ್ಗೆ 2150 ರೂ.ಗಳಿಂದ 2650 ರೂ.ಗಳವರೆಗೆ ಮಾರಾಟವಾಗಿತ್ತು.
ಪ್ರಸಕ್ತ ವರ್ಷ 1900 ರೂ.ಗಳವರೆಗೆ ಮಾತ್ರ ಮಾರಾಟವಾಗಿದೆ. ಈವರೆಗೆ ಹಳಿಯಾಳ ಎಪಿಎಂಸಿಯಲ್ಲಿ 92,850 ಕ್ವಿಂಟಾಲ್ನಷ್ಟು ಮೆಕ್ಕೆ ಜೋಳ ಮಾರಾಟವಾಗಿದೆ. ಆದರೆ, ಬೆಲೆ ಮಾತ್ರ ಫಸಲು ಆಧರಿಸಿ 1770 ರೂ.ಗಳಿಂದ 1900 ರೂ.ಗಳವರೆಗೆ ಮಾರಾಟವಾಗಿದೆ.
ಸರ್ಕಾರ ಪ್ರತಿ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಈವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ. ರೈತ ಸಂಘಟನೆಗಳು, ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿಯವರು ಮತ್ತು ಇತರ ಸಂಘಟನೆಗಳವರು ಒಂದು ತಿಂಗಳಿನಿಂದ ತಾಲೂಕಾಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರೂ ಈವರೆಗೆ ಖರೀದಿ ಕೇಂದ್ರ ಆರಂಭವಾಗಿಲ್ಲ.
ಉತ್ತಮ ದರ ಸಿಗಲಿ ಎಂದು ಕೆಲ ರೈತರು ರಸ್ತೆಗಳು ಹಾಗೂ ಎಪಿಎಂಸಿ ಪ್ರಾಂಗಣದಲ್ಲಿ ಮೆಕ್ಕೆಜೋಳ ಒಣಗಿಸಲು ಹಾಕುತ್ತಾರೆ. ಆದರೆ ಆಗಾಗ ಮಳೆ ಅಡ್ಡಿಪಡಿಸಿದಾಗ ಕಾಳುಗಳನ್ನು ಮತ್ತೆ ಚೀಲಕ್ಕೆ ತುಂಬುವುದು, ಮಳೆ ಹೋಗುತ್ತಿದ್ದಂತೆ ಮತ್ತೆ ಒಣಗಲು ಹಾಕುವುದು ರೈತರ ದಿನಚರಿಯಾಗಿದೆ. ಇದನ್ನು ತಪ್ಪಿಸಲು ಸ್ಥಳೀಯ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಮುಂದಾಗದಿರುವುದು ರೈತರಿಗೆ ಅಸಮಾಧಾನ ಹೆಚ್ಚಿಸಿದೆ.
ಸಹಕಾರ ಇಲಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಅಕ್ಟೋಬರ್ 16ರಂದೇ ಹಳಿಯಾಳದಲ್ಲಿ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಪತ್ರ ಬರೆದಿದ್ದಾರೆ.
ಆದರೆ, ಈವರೆಗೆ ಅದಕ್ಕೆ ಉತ್ತರ ಬಂದಿಲ್ಲ. ಫಸಲು ಹಾನಿಗೀಡಾಗುವ ಮುನ್ನ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರುವುದಕ್ಕಿಂತ ಮೊದಲೇ ಸರ್ಕಾರ ಬೆಂಬಲಬೆಲೆ ಖರೀದಿ ಕೇಂದ್ರವನ್ನು ಆರಂಭಿಸಿ ರೈತರ ಹಿತ ಕಾಯಬೇಕಿದೆ.
"

ತಾಲೂಕಿನಲ್ಲಿ ರೈತರು ಬೆಳೆದಿರುವ ಮೆಕ್ಕೆ ಜೋಳಕ್ಕೆ ಈ ಬಾರಿ ನಿರೀಕ್ಷಿತ ಬೆಲೆ ಸಿಗದೆ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ದಲ್ಲಾಳಿಗಳ ಹಾವಳಿ ತಡೆದು ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಸ್ಥಳೀಯ ಶಾಸಕರು ಮಾತ್ರ ಈ ಬಗ್ಗೆ ಚಕಾರ ಎತ್ತದಿರುವುದು ರೈತರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತಿದೆ.

"

ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ತಿಂಗಳ ಹಿಂದೆಯೇ ಹಳಿಯಾಳ ಎಪಿಎಂಸಿಯಿಂದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.