ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ಏರ್ಪಡಿಸಿದ್ದ ದಾಂಡೇಲಿ ಸೀಸನ್-2 ದೇಹದಾರ್ಢ್ಯ ಸ್ಪರ್ಧೆ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. 
ಉತ್ತರ ಕನ್ನಡ

ದೈಹಿಕ ಸದೃಢತೆ ಕಾಯ್ದುಕೊಳ್ಳುವುದು ಜೀವನ ಕಲೆ

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಅಸೋಸಿಯೇಷನ್ ಹಾಗೂ ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ರಾಜ್ಯ ಮಟ್ಟದ ಮಿ. ದಾಂಡೇಲಿ ಸೀಸನ್-2 ದೇಹದಾರ್ಢ್ಯ ಸ್ಪರ್ಧೆಯನ್ನು ಪಟ್ಟಣದ ಹಳೆ ನಗರಸಭೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ನಾವು ಆರೋಗ್ಯವಂತರಾಗಿರಬೇಕು. ದೈಹಿಕ ಸದೃಢತೆ ಕಾಯ್ದುಕೊಳ್ಳುವುದು ಕೂಡಾ ಒಂದು ಜೀವನ ಕಲೆಯೇ ಆಗಿದೆ. ದಾಂಡೇಲಿಯ ರೋಟರಿ ಕ್ಲಬ್ ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದು, ಸೇವಾ ಕಾರ್ಯಗಳ ಜತೆಗೆ ಇಂತಹ ಕ್ರೀಡಾಕೂಟಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸುತ್ತಿರುವುದು ಉತ್ತಮವಾದ ಕಾರ್ಯವಾಗಿದೆ ಎಂದರು.
ಮಾಜಿ ಸೈನಿಕ ರಾಜೀವ ಬಿಚ್ಚಳ್ಳಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಅಶೋತೋಷ ಕುಮಾರರಾಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ಪರ್ಧೆ ಆಯೋಜಿಸಲು ಸಹಕರಿಸಿದವರನ್ನು ಸ್ಮರಿಸಿದರು. ಜತೆಗೆ ಇತ್ತೀಚಿಗೆ ಅಗಲಿದ ರಾಷ್ಟ್ರಮಟ್ಟದ ಖ್ಯಾತಿಯ ದೇಹದಾರ್ಢ್ಯಪಟು ಆಗಿದ್ದ ದಾಂಡೇಲಿಯ ಸ್ಟ್ಯಾನ್ಲಿ ಮೊಬೆನ್ ಅವರ ಪತ್ನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂತರಾಷ್ಟ್ರೀಯ ಖ್ಯಾತಿಯ ದೇಹದಾರ್ಢ್ಯಪಟು ನವೀನ್ ಶೆಟ್ಕರ, ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಇವೆಂಟ್ ಚೇರ್ಮನ್ ಉಸ್ಮಾನ್ ಶೇಖ್, ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ರಾಜ್ಯ ಬಾಡಿ ಬಿಲ್ಡರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ವಿ. ಭಟ್ಟ, ಜಿಲ್ಲಾ ಅಧ್ಯಕ್ಷ ಎಸ್.ಡಿ. ನಾಯ್ಕ, ಮತ್ತಿತರರಿದ್ದರು.
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅಂತಿಮವಾಗಿ ಮಿಸ್ಟರ್ ದಾಂಡೇಲಿಯಾಗಿ ದಾವಣಗೆರೆಯ ಮಂಜುನಾಥ್ ಎಸ್. ಪ್ರಶಸ್ತಿ ಗೆದ್ದುಕೊಂಡರು. ಮೊದಲ ರನ್ನರ್ ಅಪ್ ಆಗಿ ಬೆಳಗಾವಿಯ ಪ್ರಶಾಂತ್ ಕನ್ನುರ್ಕರ್, ಎರಡನೆಯ ರನ್ನರ್ ಅಪ್ ಆಗಿ ಉತ್ತರ ಕನ್ನಡದ ಅಮನ್ ಶೇಕ್ ಪ್ರಶಸ್ತಿ ಗೆದ್ದುಕೊಂಡರು. ಬೆಸ್ಟ್ ಪೋಸರ್ ಆಗಿ ಬೆಳಗಾವಿಯ ಉಮೇಶ ಗಂಗೇನ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ರಾಜ್ಯದೆಲ್ಲಡೆಯಿಂದ ಒಟ್ಟು 80ಕ್ಕೂ ಹೆಚ್ಚು ಜನ ಸ್ಪರ್ಧಿಗಳು ಭಾಗವಹಿಸಿದ್ದರು.