ಎಲ್‌ಪಿಜಿ ದರ ನಿಯಂತ್ರಿಸುವಂತೆ ಆಟೋ ರಿಕ್ಷಾ ಚಾಲಕರು ಸಭೆ ನಡೆಸಿದರು.
ಕಾರವಾರ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಎಲ್‌ಪಿಜಿ ದರಲ್ಲಿ ವ್ಯತ್ಯಾಸವಾಗುತ್ತಿದೆ. ಇದು ಆಟೋ ರಿಕ್ಷಾಗಳ ಓಡಾಟದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಈಗಾಗಲೇ ಜಿಲ್ಲೆಯ ಕೆಲವು ಎಲ್‌ಪಿಜಿ ಬಂಕ್‌ಗಳಲ್ಲಿ ಆಟೋ ರಿಕ್ಷಾಗಳು ದೊಡ್ಡ ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತು ಎಲ್‌ಪಿಜಿ ತುಂಬಿಸಿಕೊಳ್ಳುತ್ತಿರುವುದು ಕಂಡುಬಂತು.
ಎಲ್‌ಪಿಜಿ ದರ ವ್ಯತ್ಯಾಸದಿಂದ ಆಟೋಗಳ ಓಡಾಟದ ಮೇಲೆಯೂ ಪರಿಣಾಮ ಬೀರುವ ಆತಂಕವಿದೆ. ಮಧ್ಯಪ್ರಾಚ್ಯದ ಯುದ್ಧ ಶುರುವಾದಾಗಿನಿಂದ ಜಿಲ್ಲೆಯ ಒಂದೊಂದು ಎಲ್‌ಪಿಜಿ ಬಂಕ್‌ಗಳು ಒಂದೊಂದು ದರ ನಿಗದಿ ಮಾಡುತ್ತಿದ್ದು, ದರ ನಿಯಂತ್ರಿಸುವAತೆ ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಮಾಡಿದ್ದಾರೆ.
ಭಟ್ಕಳ, ಕುಮಟಾ, ಕಾರವಾರ, ಅಂಕೋಲಾ, ಶಿರಸಿ ತಾಲೂಕಿನಲ್ಲಿ ಬೇರೆ, ಬೇರೆ ಕಂಪನಿಯ ಎಲ್‌ಪಿಜಿ ಬಂಕ್‌ಗಳಿವೆ. ಮೊದಲು ಎಲ್‌ಪಿಜಿ ಎಲ್ಲ ಬಂಕ್‌ಗಳಲ್ಲಿ ಸಾಮಾನ್ಯವಾಗಿ ಒಂದೇ ಇರುತ್ತಿತ್ತು. ಈಗ ಮಧ್ಯಪ್ರಾಚ್ಯ ಯುದ್ಧ ಶುರುವಾದಾಗಿನಿಂದ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಪ್ರತಿ ಕೆಜಿ ಮೇಲೆ 65.77 ರೂ.ನಿಂದ 71.41 ರೂ.ವರೆಗೆ ಜಿಲ್ಲೆಯ ವಿವಿಧ ಬಂಕ್‌ಗಳಲ್ಲಿ ಪಡೆಯಲಾಗುತ್ತಿದೆ.
ಹೆಚ್ಚುವರಿ ದರ ಪಡೆಯುತ್ತಿರುವುದರಿಂದ ಚಾಲಕರಿಗೆ ಹೊರೆಯಾಗುತ್ತಿದೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಇತರರು ಈ ಸಂದರ್ಭದಲ್ಲಿದ್ದರು.