ಕಾರವಾರ ನಗರಸಭೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.  
ಉತ್ತರ ಕನ್ನಡ

ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ಅಧಿಕಾರಿಗಳಿಂದ ನಿರಂತರ ಪರಿಶೀಲನೆ
  • ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿದ ಪರಿಶೀಲನೆ
ಕಾರವಾರ: ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಲೋಕಾಯುಕ್ತ ಪರಿಶೀಲನೆ ಸತತ ಮೂರನೇ ದಿನವೂ ಮುಂದುವರಿದಿದೆ. ಉತ್ತರ ಕನ್ನಡ ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿ ಸಿಬ್ಬಂದಿ ಗುರುವಾರವೂ ಜಿಲ್ಲೆಯ ವಿವಿಧ ಕಚೇಗಳಲ್ಲಿ ದಾಖಲೆ ಪರಿಶೀಲನೆ ನಡೆಸಿದರು.
ಉತ್ತರ ಕನ್ನಡ ಎಸ್‌ಪಿ ದಿನೇಶ ಕುಮಾರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಒಟ್ಟ 60 ಲೋಕಾಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಂಗಳವಾರ ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಸಾರ್ವಜನಿಕರ ಅಭಿಪ್ರಾಯ ಪಡೆದು ಕಡತ ಪರಿಶೀಲನೆ ನಡೆಸಿದ್ದರು.
ಬುಧವಾರ ಜಿಲ್ಲೆಯ ಎಲ್ಲ ಎಡಿಎಲ್‌ಆರ್ ಕಚೇರಿಗಳ ಮೇಲೆ ದಾಳಿ ನಡೆಸಿ, ಬಾಕಿ ಉಳಿದ ಸರ್ವೇ ಪ್ರಕರಣಗಳ ಬಗ್ಗೆ ದಾಖಲೆ ಪರಿಶೀಲಿಸಿದ್ದರು. ಗುರುವಾರ ಕಾರವಾರ, ಶಿರಸಿ ನಗರಸಭೆ ಕಚೇರಿಗಳು, ಕಾರವಾರ ಕ್ರಿಮ್ಸ್ ಆಸ್ಪತ್ರೆ, ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ ಹಾಗೂ ಎಲ್ಲ ಬಿಸಿಎಂ ಹಾಸ್ಟೆಲ್‌ಗಳಿಗೆ ಹಠಾತ್ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಸಾರ್ವಜನಿಕ ಕೆಲಸ ಮಾಡಿಕೊಡದ ದೂರು ಬಂದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಸ್ವಮೋಟೊ ಪ್ರಕರಣವೊಂದು ದಾಖಲಾಗಿದ್ದು, ಅದನ್ನು ಆಧರಿಸಿ ವಿವಿಧೆಡೆ ಪರಿಶೀಲನೆಗಳು ನಡೆದಿವೆ. ಈ ಪರಿಶೀಲನೆಯಲ್ಲಿ ಈ ದಾಳಿಗಳ ವೇಳೆ ಕಂಡುಬಂದ ಲೋಪಗಳನ್ನು ಮಹಜರು ಮಾಡಿ ಲೋಕಾಯುಕ್ತ ಕೇಂದ್ರ ಕಚೇರಿಗೆ ಕಳಿಸಿಕೊಡಲಾಗುವುದು ಎಂದು ಎಸ್‌ಪಿ ದಿನೇಶ ಕುಮಾರ್ ತಿಳಿಸಿದ್ದಾರೆ.