ಬೆಳೆ ಸಾಲ ಪಾವತಿಗೆ ಕಂತುಗಳಲ್ಲಿ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸಂಸದ ವಿಶ್ವೇಶ್ವರ ಹಗೆಡೆ ಕಾಗೇರಿ ಅವರಿಗೆ ಸಹಕಾರಿ ಸಂಘಗಳ ಮುಖ್ಯಸ್ಥರು ಮನವಿ ನೀಡಿದರು. ಜಿ. ಆರ್. ಹೆಗಡೆ, ಮಹೇಂದ್ರ ಭಟ್, ಎಂ. ಎ. ಹೆಗಡೆ, ಪ್ರಭಾಕರ ಹೆಗಡೆ ಇತರರಿದ್ದರು.
ಕಳೆದ ಮಳೆಗಾಲದಲ್ಲಿ ಕೊಳೆ ರೋಗ ಹಾಗೂ ಎಲೆ ಚುಕ್ಕೆ ರೋಗದಿಂದ ಶೇ.70 ರಷ್ಟು ಅಡಕೆ ಬೆಳೆ ನಷ್ಟವಾಗಿದೆ. ಈ ಸ್ಥಿತಿಯಲ್ಲಿ ಇಳುವರಿ ಏಕಾಏಕಿ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬೆಳೆ ಸಾಲ ಪಾವತಿಗೆ ಕಂತುಗಳಲ್ಲಿ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸಂಸದ ವಿಶ್ವೇಶ್ವರ ಹಗೆಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮಂಗಳವಾರ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ನಿಯೋಗ ಮನವಿ ಸಲ್ಲಿಸಿತು.
ಇಲ್ಲಿಯವರೆಗೂ ರೈತರು ತಾವು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಕಾಲಕಾಲಕ್ಕೆ ಮರುಪಾವತಿ ಮಾಡುತ್ತ ಬಂದಿದ್ದಾರೆ. ಆದರೆ ಈ ವರ್ಷ, ವಿಶೇಷವಾಗಿ ಸಾಂಪ್ರದಾಯಿಕ ಅಡಕೆ ತೋಟಗಳ ರೈತರು ತಾವು ಪಡೆದ ಸಾಲ ಹಾಗೂ ಕೃಷಿ ಮಾಧ್ಯಮಿಕ ಸಾಲ ಹಾಗೂ ಬಡ್ಡಿ ತುಂಬಲು ಸಾಧ್ಯವಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಹಿತ ಕಾಯುವುದು ಅಗತ್ಯವಾಗಿದೆ. ಇನ್ನೇನು ಸಾಲ ಮರುಪಾವತಿ ಸಮಯ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಮುಂದಾಗಬೇಕು. 2025-26ನೇ ಸಾಲಿನಲ್ಲಿ ಪಡೆದ ಸಾಲವನ್ನು ಬಡ್ಡಿ ರಹಿತವಾಗಿ 5 ಕಂತುಗಳನ್ನಾಗಿ ಪರಿವರ್ತಿಸಿ ಹಾಗೂ ಕೃಷಿ ಮಾಧ್ಯಮಿಕ ಸಾಲದ ಬಡ್ಡಿಯನ್ನು ಮನ್ನಾ ಮಾಡಿಕೊಡಬೇಕು. ವಾಡಿಕೆಯಂತೆ ಹೊಸ ಸಾಲವನ್ನು ಮಂಜೂರು ಮಾಡಬೇಕು. ಈ ಕುರಿತು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ವಿನಂತಿಸಿದರು.
ಬೆಳೆ ವಿಮೆ ಕೊಡಿಸಿ: ಪ್ರಸ್ತುತ ಅವಧಿಯಲ್ಲಿ ಅಡಕೆ, ಕಾಳುಮೆಣಸು ಬೆಳೆಗಳಿಗೆ ಸಂಬಂಧಿಸಿ ಹವಾಮಾನ ಆಧರಿತ ಬೆಳೆವಿಮೆಯ ಪರಿಹಾರ ಇಂದಿಗೂ ರೈತರ ಖಾತೆಗೆ ಜಮಾ ಆಗದೆ ಮತ್ತಷ್ಟು ನಿರಾಸೆ ಆವರಿಸಿದೆ. ವಿಮಾ ಪರಿಹಾರವನ್ನು ಅತೀ ಶೀಘ್ರದಲ್ಲಿ ದೊರಕಿಸಿಕೊಡಬೇಕು ಎಂದೂ ಆಗ್ರಹಿಸಿದರು.
ಈ ವೇಳೆ ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ, ಸಹಕಾರಿ ಯೂನಿಯನ್ ನಿರ್ದೇಶಕ ಮಹೇಂದ್ರ ಭಟ್, ಎಂ.ಎ. ಹೆಗಡೆ, ಪ್ರಭಾಕರ ಹೆಗಡೆ, ಆರ್.ವಿ. ಹೆಗಡೆ ಚಿಪಗಿ ಇತರರಿದ್ದರು.