ಕುಮಟಾದಲ್ಲಿ ಏರ್ಪಡಿಸಿದ್ದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ದಿನಕರ ಶೆಟ್ಟಿ, ರವೀಂದ್ರ ಭಟ್ ಸೂರಿ, ಮುಕುಂದ ನಾಯ್ಕ, ಭುವನ ಭಾಗ್ವತ, ಕೃಷ್ಣಮೂರ್ತಿ ಕುಲಕರ್ಣಿ, ಗಜಾನನ ಹೆಗಡೆ, ಜನಾರ್ದನ ನಾಯಕ, ಗಣಪತಿ ಅಡಿಗುಂಡಿ ಇತರರಿದ್ದರು.  
ಉತ್ತರ ಕನ್ನಡ

Literature ಸಾಹಿತ್ಯ ಚುಟುಕಾದರೂ ಬೆಳವಣಿಗೆ ನಿರಂತರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದಿನಕರ ಶೆಟ್ಟಿ ಅಭಿಪ್ರಾಯ
  • ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ
ಕುಮಟಾ: ಸಾಹಿತ್ಯದ ಪ್ರಕಾರ ಚುಟುಕಾದರೂ ಬೆಳವಣಿಗೆ ದೀರ್ಘವಾಗಿದೆ ಮತ್ತು ನಿರಂತರವಾಗಿದೆ. ಇದೊಂದು ಸಮಾಜಕ್ಕೆ ಬೇಕಾಗಿರುವಂತಹ ಉತ್ತಮ ಕಾರ್ಯಕ್ರಮವಾಗಿದೆ. ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾದ ಹಲವಾರು ಸಾಧಕರು ಕ್ಷೇತ್ರಕ್ಕೆ ಹೆಸರು ತಂದುಕೊಟ್ಟಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಲಕ್ಷ್ಮೀಬಾಯಿ ಬುರ್ಡೇಕರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ 9ನೇ ಹಾಗೂ ಕುಮಟಾ ತಾಲೂಕು 5ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸನ್ಮಾನಿತರಾದ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣಾ ಯಾಜಿ ಬಳ್ಕೂರು ಮಾತನಾಡಿ, ಯಕ್ಷಗಾನವು ಮನರಂಜನೆಗಿಂತ ಮನೋವಿಕಾಸಕ್ಕೆ ಕಾರಣವಾದ ಕಲೆಯಾಗಿದೆ. ಶುದ್ಧ ಕನ್ನಡದ ಏಕಮಾತ್ರ ಕಲೆಯಾಗಿರುವ ಯಕ್ಷಗಾನದಂತೆಯೇ ಚುಟುಕು ಸಾಹಿತ್ಯವೂ ಕನ್ನಡದ ಆರಾಧನೆಯಲ್ಲಿ ಮುಂಚೂಣಿ ವೇದಿಕೆಯಾಗಿದೆ ಎಂದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ನಾಗರಾಜ ಹೆಗಡೆ ಮಾತನಾಡಿ, ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಿರುವುದು ವಿಶೇಷ ಖುಷಿ ಕೊಟ್ಟಿದೆ. ಯುವಜನತೆಗೆ ಪುಷ್ಟಿ ನೀಡಿದೆ ಎಂದರು. ತಾಲೂಕಾಧ್ಯಕ್ಷ ಗಣಪತಿ ಅಡಿಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿ, ‘ಕುಮಟಾ ಮುಕುಟ’ ಕೃತಿ ಬಿಡುಗಡೆಗೊಳಿಸಿದ ಕ್ರಿಶಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುಕುಂದ ನಾಯ್ಕ, ಕ್ರೀಡಾಪಟು ಗಿರೀಶ ಶೆಟ್ಟಿ, ಮಹಾಬಲೇಶ್ವರ ಹೆಗಡೆಕರ್, ಚುಟುಕು ಗೋಷ್ಠಿ ಉದ್ಘಾಟಿಸಿದ ಉದ್ಯಮಿ ಭುವನ ಭಾಗ್ವತ, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿದರು.
ಸಾಧಕರಾದ ನಾಗರಾಜ ಹೆಗಡೆ, ಗೌರೀಶ ಶೆಟ್ಟಿ, ಮಹಾಬಲೇಶ್ವರ ಹೆಗಡೆಕರ, ಕೃಷ್ಣಾ ಯಾಜಿ ಬಳ್ಕೂರ, ಶಾಂತಾರಾಮ(ಸಚಿನ್) ಆರ್. ನಾಯ್ಕ, ಡಾ. ಗೋಪಾಲಕೃಷ್ಣ ಹೆಗಡೆ, ದಿನೇಶ ಮಡಿವಾಳ ಅಮ್ಮಿನಳ್ಳಿ, ಸಿ.ಪಿ. ಶಿವಚಂದ್ರ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಗಜಾನನ ಹೆಗಡೆ, ತಾಪಂ ಇಒ ರಾಜೇಂದ್ರ ಭಟ್, ಡಾ. ಜಿ.ಎ. ಹೆಗಡೆ ಸೋಂದಾ, ನಿಕಟಪೂರ್ವ ಜಿಲ್ಲಾ ಸಮ್ಮೇಳನಾಧ್ಯಕ್ಷ ಜನಾರ್ದನ ನಾಯಕ, ಜಿಲ್ಲಾಧ್ಯಕ್ಷ ಜಿ.ವಿ. ನಾಯಕ, ರಾಜ್ಯ ಸಮಿತಿ ಸದಸ್ಯ ವಿ.ಜಿ. ಪಾಟೀಲ, ಕಸಾಪ ಕಾರ್ಯದರ್ಶಿ ಪಿ.ಆರ್. ನಾಯ್ಕ, ಲೇಖಕ ಶ್ರೀನಿವಾಸ ಶಾನಭಾಗ, ತಿಗಣೇಶ ಮಾಗೋಡ ವೇದಿಕೆಯಲ್ಲಿದ್ದರು.
ಸಮ್ಮೇಳನದಲ್ಲಿ ಜನಾರ್ದನ ನಾಯಕ ವಿರಚಿತ ‘ಸುಗಂಧ’, ವಿಜಯಲಕ್ಷ್ಮೀ ನಾಯಕ ವಿರಚಿತ ‘ಕಲಸೋಗರ’ ಶ್ರೀನಿವಾಸ ಶಾನಭಾಗ ವಿರಚಿತ ‘ಹೂವಿನ ಹಂದರ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಉದಯ ಮಡಿವಾಳ, ಎಂ.ಎನ್. ಭಟ್ ಹಾಗೂ ಗಣೇಶ ಜೋಶಿ ನಿರ್ವಹಿಸಿದರು.

ಭಾವನೆಗಳಿಗೆ ಭಾಷೆಯ ರೂಪ ಕೊಡುವ ಸಾಧನವೇ ಸಾಹಿತ್ಯ. ಅಕ್ಷರಗಳ ಆಸರೆಯ ಸಾಹಿತ್ಯದ ಸಾಗರದಲ್ಲಿ ಚುಟುಕು ಚಿಕ್ಕ ಅಲೆಯಂತಿದ್ದರೂ ಅದರ ಅರ್ಥದ ಆಳವು ಸಾಗರಕ್ಕಿಂತ ಕಡಿಮೆಯಿಲ್ಲ. ಇಂದಿನ ದಿನದಲ್ಲಿ ಚುಟುಕು ಸಾಹಿತ್ಯದ ಮಹತ್ವ ಹೆಚ್ಚಾಗಿದೆ. ಚುಟುಕು ಕೇವಲ ಸಾಹಿತ್ಯದ ಪ್ರಕಾರವಲ್ಲ, ಅದು ಸಂವೇದನೆಯ ಸಂಸ್ಕೃತಿ. ಚುಟುಕು ಸಾಹಿತ್ಯ ಸಮಾಜದ ಪರಿವರ್ತನೆಗೆ ಕಾರಣವಾಗುವ ಸಾಮರ್ಥ್ಯ ಹೊಂದಿದೆ. ಕೇವಲ ಪ್ರಾಸ, ಅಲಂಕಾರಕ್ಕಾಗಲ್ಲದೇ ಮನುಷ್ಯತ್ವ ಬೆಳೆಸುವುದಕ್ಕಾಗಿ ಚುಟುಕು ಸೃಷ್ಟಿಯಾಗಬೇಕಿದೆ. ಕನ್ನಡದ ಭವಿಷ್ಯ ಸರ್ಕಾರಗಳ ಕೈಯಲ್ಲಿಲ್ಲ, ನಮ್ಮಗಳ ಮನಸಿನಲ್ಲಿದೆ. ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಗೌರವಿಸಿರುವುದು ಕಡಿಮೆ ಪದದಲ್ಲಿ ಅನಂತ ಅರ್ಥ ಬೆಳೆಸುವ ಸಾಹಿತ್ಯ ಸಂಸ್ಕೃತಿಗೆ ಸಿಕ್ಕಿರುವ ಮಾನ್ಯತೆಯಾಗಿದೆ.

— ರವೀಂದ್ರ ಭಟ್ ಸೂರಿ ಸರ್ವಾಧ್ಯಕ್ಷ, ಚುಟುಕು ಸಾಹಿತ್ಯ ಸಮ್ಮೇಳನ