ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
- ಚಾತುರ್ಮಾಸ್ಯದಲ್ಲಿ ಧರ್ಮ ಸಾಧನೆಯೊಂದಿಗೆ ಹಸಿರು ಸಂಕಲ್ಪ
- ಅರಣ್ಯ ಉಳಿವಿಗೆ ಜನಾಂದೋಲನ
- ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಂಕಲ್ಪ
ಶಿರಸಿ: ಹಸಿರು ಮಠ ಎಂದೇ ಖ್ಯಾತಿ ಪಡೆದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಚಾತುರ್ಮಾಸ್ಯದ ಅಂಗವಾಗಿ ಪರಿಸರ ಸಂರಕ್ಷಣೆಯ ಬೃಹತ್ ಪತ್ರ ಚಳವಳಿಗೆ ಚಾಲನೆ ನೀಡಿದೆ. (river linking)
ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳು ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಈ ಅಭಿಯಾನವು ಜು. 29ರಿಂದ ಸೆಪ್ಟೆಂಬರ್ 26ರವರೆಗೆ ನಡೆಯುವ ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಠಕ್ಕೆ ಆಗಮಿಸುವ ಸಾವಿರಾರು ಶಿಷ್ಯ ಭಕ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಿದ್ದಾರೆ.
ಹಸಿರು ಸ್ವಾಮೀಜಿ ಎಂದೇ ಜನಮನದಲ್ಲಿ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಂಕಲ್ಪದಂತೆ, ಪ್ರಕೃತಿಯ ರಕ್ಷಣೆಯೇ ಪರಮ ಧರ್ಮ ಎಂಬ ಸಂದೇಶವನ್ನು ಸಮಾಜದೊಳಗೆ ಬಿತ್ತುವ ಉದ್ದೇಶದಿಂದ ಚಾತುರ್ಮಾಸ್ಯದ ಈ ಪತ್ರ ಚಳವಳಿಯನ್ನು ಜನಾಂದೋಲನವಾಗಿ ರೂಪಿಸಲಾಗಿದೆ.
ಕಳೆದ ತಿಂಗಳು ಶಿರಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ 25 ಸಾವಿರಕ್ಕೂ ಅಧಿಕ ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಪರಿಸರ ಕಾರ್ಯಕರ್ತ ವಿಶ್ವನಾಥ ಶೀಗೇಹಳ್ಳಿ ಅವರು ಶ್ರೀಗಳ ಸೂಚನೆಯಂತೆ ಅದರ ಸಂಚಾಲಕತ್ವ ವಹಿಸಿದ್ದರು.
ಮುಂದುವರಿದ ಭಾಗವಾಗಿ ಈಗ ಚಾತುರ್ಮಾಸ್ಯದ ಅವಧಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸುಮಾರು 10 ಸಾವಿರಕ್ಕೂ ಅಧಿಕ ಪತ್ರಗಳನ್ನು ಕಳುಹಿಸುವ ಗುರಿ ಹೊಂದಲಾಗಿದೆ. ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಭಕ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಠದಲ್ಲಿ ಸಿದ್ಧಪಡಿಸಿರುವ ಮನವಿ ಪತ್ರದಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳು ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆ, ದಟ್ಟ ಅರಣ್ಯ, ಜೀವವೈವಿಧ್ಯ ಹಾಗೂ ಕೃಷಿಭೂಮಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ನದಿಗಳ ಸಹಜ ಹರಿವು ಕುಂಠಿತಗೊಂಡರೆ ಕೆಳಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಎದುರಾಗಬಹುದು.
ಮೀನು ಸೇರಿದಂತೆ ಜಲಚರಗಳ ಸಂತಾನೋತ್ಪತ್ತಿಗೆ ಧಕ್ಕೆಯಾಗುವುದರ ಜೊತೆಗೆ ರೈತರು, ಮೀನುಗಾರರು ಹಾಗೂ ಅರಣ್ಯವನ್ನೇ ಅವಲಂಬಿಸಿರುವ ಸಮುದಾಯಗಳ ಜೀವನೋಪಾಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದರ ಬದಲಾಗಿ ಮಳೆನೀರು ಸಂಗ್ರಹಣೆ, ಕೆರೆಗಳ ಪುನರುಜ್ಜೀವನ ಹಾಗೂ ಸ್ಥಳೀಯ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದಲೂ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮತೆ, ಅರಣ್ಯ ಪ್ರದೇಶ, ವನ್ಯಜೀವಿಗಳ ಆವಾಸ, ಅಂತರ್ಜಲ ವ್ಯವಸ್ಥೆ ಹಾಗೂ ಜಲಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಆತಂಕವಿದ್ದು, ಪರಿಸರ ಸಮತೋಲನಕ್ಕೆ ಧಕ್ಕೆಯಾಗುವ ಇಂತಹ ಯೋಜನೆ ಮರುಪರಿಶೀಲಿಸಿ ಕೈಬಿಡಬೇಕು ಎಂಬ ಆಗ್ರಹವೂ ಅಭಿಯಾನದ ಪ್ರಮುಖ ಭಾಗವಾಗಿದೆ.
ಧರ್ಮದ ಮೂಲಕ ಸಮಾಜ ಜಾಗೃತಿಯಾಗಬೇಕು, ಆಧ್ಯಾತ್ಮಿಕತೆಯೊಂದಿಗೆ ಪರಿಸರ ಪ್ರಜ್ಞೆಯೂ ಬೆಳೆಯಬೇಕು ಎಂಬ ಸಂದೇಶ ಸಾರುತ್ತಿರುವ ಮಠ ಪವಿತ್ರ ವೃಕ್ಷ ಮಂತ್ರಾಕ್ಷತೆ ಜತೆಗೆ ಈಗ ಈ ಅಭಿಯಾನ, ತಳಮಟ್ಟದಿಂದ ಸರ್ಕಾರದವರೆಗೆ ಪರಿಸರ ಉಳಿವಿನ ಧ್ವನಿಯನ್ನು ತಲುಪಿಸುವ ಮಹತ್ವದ ಜನಚಳವಳಿಯಾಗಿ ರೂಪುಗೊಳಿಸುತ್ತಿದೆ.
"
ನದಿ ತಿರುವು ಯೋಜನೆ ಕುರಿತು ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ವಿರೋಧವನ್ನು ಸರ್ಕಾರಕ್ಕೆ ನಿರಂತರವಾಗಿ ತಿಳಿಸುವ ಪ್ರಯತ್ನ ಇದು. ಇಲ್ಲಿನ ಮಾದರಿಯ ಪತ್ರವನ್ನಾಗಲಿ ಅಥವಾ ತಮ್ಮದೇ ಮಾತುಗಳಲ್ಲಿ ಮನವಿಯನ್ನಾಗಲಿ ಬರೆದು ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಬಹುದು.
— ಸೋಂದಾ ಸ್ವರ್ಣವಲ್ಲೀ ಶ್ರೀಗಳು
ಇದು ಕೇವಲ ಪತ್ರ ಬರೆಯುವ ಕಾರ್ಯಕ್ರಮವಲ್ಲ; ಪ್ರಕೃತಿಯ ಪರವಾಗಿ ಜನರ ಧ್ವನಿಯನ್ನು ಸರ್ಕಾರದ ಕಿವಿಗೆ ತಲುಪಿಸುವ ನಿರಂತರ ಜನಾಂದೋಲನ. ನದಿ, ಅರಣ್ಯ ಮತ್ತು ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ.
— ಅನಂತ ಅಶೀಸರ, ಅಧ್ಯಕ್ಷರು, ಬೇಡ್ತಿ-ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿ