ಅರಣ್ಯ ಅತಿಕ್ರಮಣದಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಶಿರಸಿಯ ಸ್ವರ್ಣವಲ್ಲಿಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ (Swarnavalli Shree) ಅವರೊಂದಿಗೆ ಅರಣ್ಯಭೂಮಿ, ಬೆಟ್ಟದ ಹಕ್ಕುಗಳ ಕುರಿತು ಚರ್ಚೆ ನಡೆಸಿದರು. 
ಉತ್ತರ ಕನ್ನಡ

ನ್ಯಾಯಯುತ ಪರಿಹಾರಕ್ಕೆ ಪ್ರಯತ್ನಿಸೋಣ Swarnavalli Shree

ವಿನಯ ಹೆಗಡೆ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳೊಂದಿಗೆ ರವೀಂದ್ರ ನಾಯ್ಕ ಸಮಾಲೋಚನೆ
  • ಅರಣ್ಯ ಅತಿಕ್ರಮಣದಾರರ ಸಮಸ್ಯೆ ಚರ್ಚೆ
  • ಪರಿಸರ ಸಂರಕ್ಷಣೆ ಕುರಿತು ವಿಚಾರ ವಿನಿಮಯ
ಶಿರಸಿ: ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳೊಂದಿಗೆ (Swarnavalli Shree) ಅರಣ್ಯ ಅತಿಕ್ರಮಣದಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಗುರುವಾರ ಮಹತ್ವದ ಸಮಾಲೋಚನೆ ನಡೆಸಿದರು.
ಅರಣ್ಯವಾಸಿಗಳ ಹಕ್ಕುಗಳು, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು, ಪರಿಸರ ಸಂರಕ್ಷಣೆ, ನದಿ ಜೋಡಣೆ ಯೋಜನೆಗಳು ಹಾಗೂ ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಸಂಬಂಧಿಸಿದ ಹಲವು ವಿಷಯಗಳು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದವು.
ಅರಣ್ಯ ಭೂಮಿಯಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳ ಹಕ್ಕುಗಳ ರಕ್ಷಣೆ, ಅವರಿಗೆ ಕಾನೂನಿನಡಿ ದೊರೆಯಬೇಕಾದ ಸೌಲಭ್ಯಗಳು, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿರುವ ಅಡೆತಡೆಗಳು ಹಾಗೂ ಬೆಟ್ಟದ ಹಕ್ಕುಗಳಿಗೆ ಸಂಬಂಧಿಸಿದ ಗೊಂದಲಗಳ ಕುರಿತು ರವೀಂದ್ರ ನಾಯ್ಕ ಅವರು ಶ್ರೀಗಳ ಗಮನಕ್ಕೆ ತಂದರು.
ಈ ವಿಷಯದಲ್ಲಿ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಯುತ ಪರಿಹಾರ ದೊರಕುವಂತೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.
ಇದೇ ಸಂದರ್ಭದಲ್ಲಿ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ, ಅರಣ್ಯ ಸಂಪತ್ತು, ಜಲಮೂಲಗಳು, ಕೃಷಿ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿ, ಜನ ಜೀವನಕ್ಕೆ ಇರುವ ಆತಂಕ ದೂರಮಾಡಬೇಕಾಗಿದೆ ಎಂಬ ಕುರಿತು ಚರ್ಚೆ ನಡೆಯಿತು.
ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಯಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮಗಳು, ನದಿಗಳ ಸ್ವಾಭಾವಿಕ ಹರಿವು, ಪರಿಸರ ಸಮತೋಲನ ಹಾಗೂ ಭವಿಷ್ಯದ ಜಲ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯ ಕುರಿತೂ ಚರ್ಚೆ ನಡೆಯಿತು.
ಅಭಿವೃದ್ಧಿ ಯೋಜನೆಗಳು ಪರಿಸರಕ್ಕೆ ಧಕ್ಕೆಯಾಗದಂತೆ ಹಾಗೂ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗದಂತೆ ಜಿಲ್ಲೆಯ ಯೋಜನೆಗಳು ರೂಪುಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ಉಳಿವಿಗೆ ಕಾನೂನಿನ ಹೋರಾಟವೇ ಹೆಚ್ಚು ಮಹತ್ವದ್ದೆಂದು ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಕಾನೂನು ಹೋರಾಟದ ಸಿದ್ಧತೆಯನ್ನು ಕೊಳ್ಳ ಸಂರಕ್ಷಣಾ ಸಮಿತಿ ಮಾಡುತ್ತಿದೆ ಎಂದು ಶ್ರೀಗಳು ತಿಳಿಸಿದರು.
ರವೀಂದ್ರ ನಾಯ್ಕ ಅವರು ಅರಣ್ಯವಾಸಿಗಳ ಮೂಲಕ ದಶಲಕ್ಷ ಗಿಡ ನೆಡಲು ಪ್ರೇರೇಪಿಸಿದ್ದು ಸಂತಸ ತಂದಿದೆ ಎಂದು ಶ್ರೀಗಳು ಅಭಿನಂದಿಸಿದರು. ಈ ವೇಳೆ ಸುರೇಶ ಹಕ್ಕಿಮನೆ ಇತರರು ಇದ್ದರು.