ಸಿದ್ದಾಪುರದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿದರು. ಆರ್.ಎಂ.ಹೆಗಡೆ ಬಾಳೇಸರ, ರಾಘವೇಂದ್ರ ಶಾಸ್ತ್ರಿ ಇದ್ದರು. 
ಉತ್ತರ ಕನ್ನಡ

ಸರ್ಕಾರಕ್ಕೆ ಒಗ್ಗಟ್ಟಿನ ಧ್ವನಿ ಕೇಳಿಸೋಣ

ಸಿದ್ದಾಪುರ: ಸರ್ಕಾರ ನಮ್ಮ ಜಿಲ್ಲೆಗೆ ಅವಶ್ಯಕತೆ ಇರುವ ಯೋಜನೆಗಳನ್ನು ನೀಡದೆ ನಮ್ಮ ಅರಣ್ಯ ಸಂಪತ್ತನ್ನು, ಪರಿಸರವನ್ನು ನಾಶ ಪಡಿಸುವ ಯೋಜನೆಗಳನ್ನು ನೀಡಲು ಮುಂದಾಗುತ್ತಿರುವುದು ಬೇಸರದ ಸಂಗತಿ. ನಮ್ಮ ನದಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಒಗ್ಗೂಡಿ ಹೋರಾಡಿದರೆ ಮಾತ್ರ ಸರ್ಕಾರಕ್ಕೆ ನಮ್ಮ ಧ್ವನಿ ಕೇಳುತ್ತದೆ ಎಂದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿರಸಿಯಲ್ಲಿ ಜ. 11ರಂದು ನಡೆಯಲಿರುವ ಬೃಹತ್ ಜನ ಸಮಾವೇಶದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂತಹ ಪರಿಸ್ಥಿತಿ ಹಿಂದೆ ಬಂದಾಗ ನಮ್ಮ ಪೂರ್ವಜರು ಹೋರಾಡಿ ನೆಲ, ಜಲವನ್ನು ನಮಗೆ ಉಳಿಸಿ ಕೊಟ್ಟಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಅದನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಪ್ರತಿ ಮನೆಯಿಂದ ಜನರು ಬೃಹತ್ ಜನ ಸಮಾವೇಶಕ್ಕೆ ಬರಬೇಕು ಎಂದು ಶ್ರೀಗಳು ಕರೆ ನೀಡಿದರು.
ಗೋಪಾಲಕೃಷ್ಣ ತಂಗಾರಮನೆ ಮಾತನಾಡಿ ಬೇಡ್ತಿ - ವರದಾ ಮತ್ತು ಅಘನಾಶಿನಿ - ವೇದಾವತಿ ನದಿ ಜೋಡಣೆ ಯೋಜನೆಯ ರೂಪುರೇಷೆೆಗಳನ್ನು ವಿವರಿಸಿದರು.
ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ, ಟಿಎಂಎಸ್ ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ, ಶಾಮಲಾ ಹೆಗಡೆ ಹೂವಿನಮನೆ ಮಾತನಾಡಿದರು.
ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ ಬಿಳಗಿ, ಎನ್.ವಿ .ಹೆಗಡೆ ಮುತ್ತಿಗೆ, ಆರ್.ಎಂ. ಪಾಟೀಲ, ಆರ್.ಎಸ್. ಹೆಗಡೆ ಹರಗಿ, ಪಿ .ಬಿ. ಹೊಸೂರು, ಎಂ.ಐ. ನಾಯ್ಕ ಕೆಳಗಿನಸಸಿ, ಕೆ .ಕೆ. ನಾಯ್ಕ ಸುಂಕತ್ತಿ, ನಾಗಪತಿ ಗೌಡ ಹುತ್ಗಾರ ಇದ್ದರು.
ಜಿ.ಜಿ. ಹೆಗಡೆ ಬಾಳಗೋಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಬುಧವಾರ ನಿಧನಹೊಂದಿದ ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.