ಯಲ್ಲಾಪುರದ ವೈಟಿಎಸ್‌ಎಸ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಿರಾಟ ಹಿಂದೂ ಸಮಾವೇಶದಲ್ಲಿ ನೆಲೆಮಾವು ಮಠದ ಶ್ರೀಗಳು ಆಶೀರ್ವಚನ ನೀಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ, ಕುಮಾರಸುಬ್ರಹ್ಮಣ್ಯ ಭಟ್ಟ, ಸಂತೋಷ ಗುಡಿಗಾರ, ನಮಿತಾ ಬೀಡಿಕರ್ ಇತರರಿದ್ದರು.
ಯಲ್ಲಾಪುರ: ಬದುಕಿನಲ್ಲಿ ಧರ್ಮವೇ ಜೀವಾಳ. ನಿರಂತರ ಧರ್ಮಾಚರಣೆಯಿಂದ ಮಾತ್ರ ಜೀವನ ಸರಿಯಾದ ಪಥದಲ್ಲಿ ಹೋಗುತ್ತದೆ ಎಂದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ವೈಟಿಎಸ್‌ಎಸ್ ಮೈದಾನದಲ್ಲಿ ಸಂಘ ಶತಾಬ್ದಿ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಿಂದುತ್ವ ಅವನತಿಯತ್ತ ಹೋಗುತ್ತಿಲ್ಲ. ಆದರೆ, ಆಚರಣೆಗಳನ್ನು ಬಿಡುವ ಮೂಲಕ ನಾವೇ ಅವನತಿಯತ್ತ ತಳ್ಳುತ್ತಿದ್ದೇವೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳಿಂದ ನಾವೇ ಮಕ್ಕಳನ್ನು ದೂರ ಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ನಾವು ಅರಿತು, ಮಕ್ಕಳಿಗೂ ತಿಳಿಹೇಳುವ ಕಾರ್ಯ ಆಗಬೇಕು. ಮಕ್ಕಳ ಮೇಲೆ ಅಂಕದ ಹಿಂದೆ ಓಡುವ ಒತ್ತಡ ಹೇರಬಾರದು. ಅವರನ್ನು ಮೊಬೈಲ್, ಟಿವಿಯ ಗೀಳಿನಿಂದ ಹೊರತಂದು ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯವನ್ನು ಹಿರಿಯರು ಮಾಡಬೇಕು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಹ್ವಾನಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ ದಿಕ್ಸೂಚಿ ಭಾಷಣ ಮಾಡಿ, ಧರ್ಮ ಸಂಸ್ಥಾಪನೆಗೆ ಸಂಘಟನೆಯಿಂದ ಮಾತ್ರ ಸಾಧ್ಯ. ರಾಷ್ಟ್ರದ ಕುರಿತು ಪರಸ್ಪರ ಪೂರಕ, ಪೋಷಕ ಮಾನಸಿಕತೆ ಇದ್ದಾಗ ಮಾತ್ರ ಭಾರತ ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಿ ಮುನ್ನಡೆಯಲು ಸಾಧ್ಯ. ಹೆಣ್ಣನ್ನು ದೇಹವಾಗಿ ನೋಡದೆ, ದೇವತೆಯಾಗಿ ನೋಡುವ ದೃಷ್ಟಿಕೋನ ಬೆಳೆದಲ್ಲಿ ಅತ್ಯಾಚಾರ, ಅನಾಚಾರಗಳು ನಿಲ್ಲಲು ಸಾಧ್ಯ. ಹಿಂದೂ ಸಮಾಜ ಬಲಿಷ್ಠವಾಗಲು ಕುಟುಂಬ ವ್ಯವಸ್ಥೆ ಗಟ್ಟಿಯಾಗಬೇಕು. ಕೌಟುಂಬಿಕ ಜೀವನ ಮೌಲ್ಯಗಳು, ಸಾಮರಸ್ಯ, ಸ್ವದೇಶಿ-ಸ್ವಭಾಷಾ-ಸ್ವಭೂಷಾ, ಪರ್ಯಾವರಣ, ನಾಗರಿಕ ಶಿಷ್ಟಾಚಾರಗಳನ್ನು ಎಲ್ಲರೂ ಒಂದಾಗಿ ಪಾಲಿಸುವಂತಾಗಬೇಕು. ರಾಷ್ಟ್ರಹಿತಕ್ಕಾಗಿ ಸಂಘಟಿತರಾಗುವ ಭಾವನೆ ಎಲ್ಲರಲ್ಲಿ ಮೂಡಬೇಕು ಎಂದರು.
ವಿವಿಧ ನೆಲೆಯಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಲಾಯಿತು. ನಗರ ಮಂಡಲದ ಅಧ್ಯಕ್ಷ ಸಂತೋಷ ಗುಡಿಗಾರ, ನಮಿತಾ ಬೀಡಿಕರ ಉಪಸ್ಥಿತರಿದ್ದರು. ಮಂಜುನಾಥ ಭಟ್ಟ ಸಂಗಡಿಗರು ವೇದಘೋಷಗೈದರು. ಪಲ್ಲವಿ ಭಟ್ಟ ಕವಾಳೆ ವೈಯಕ್ತಿಕ ಗೀತೆ ಹಾಡಿದರು. ಹಿಂದೂ ಸಮಾವೇಶ ಸಮಿತಿಯ ಮಂಡಲ ಅಧ್ಯಕ್ಷ ಕುಮಾರಸುಬ್ರಹ್ಮಣ್ಯ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಸಂಧ್ಯಾ ವಿಷ್ಣು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿ ಕಟ್ಟಿಮನಿ, ಕೇಬಲ್ ನಾಗೇಶ ನಿರ್ವಹಿಸಿದರು. ಚಂದನ ನಾಯ್ಕ ವಂದಿಸಿದರು.
ಶೋಭಾಯಾತ್ರೆ
ಸಮಾವೇಶಕ್ಕೂ ಮುನ್ನ ಗ್ರಾಮದೇವಿ ದೇವಸ್ಥಾನದಿಂದ ವೈಟಿಎಸ್‌ಎಸ್ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ತೆರೆದ ವಾಹನದಲ್ಲಿ ಪೀಠಾರೂಢರಾದ ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಶ್ರೀಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಹಾಪುರುಷರ ವೇಷ ತೊಟ್ಟ ವಿದ್ಯಾರ್ಥಿಗಳು, ಭಜನಾ ಮಂಡಳಿಯ ಕಲಾವಿದರಿಂದ ಭಜನೆ ಶೋಭಾಯಾತ್ರೆಯ ಮೆರಗು ಹೆಚ್ಚಿಸಿತು.