ಶಿರಸಿ ತಾಲೂಕು ಬನವಾಸಿಯ ಹಿಂದೂ ಸಮ್ಮೇಳನದಲ್ಲಿ ಬಂಗಾರಮಕ್ಕಿಯ ಮಾರುತಿ ಗುರೂಜಿ ಮಾತನಾಡಿದರು. ಶ್ರೀ ಡಾ. ಮಹಾಂತ ಸ್ವಾಮೀಜಿ, ಗಂಗಾಧರ ಹೆಗಡೆ ಇತರರಿದ್ದರು. 
ಉತ್ತರ ಕನ್ನಡ

ಸಂಸ್ಕಾರದೊಂದಿಗೆ ರಾಷ್ಟ್ರದ ಪರಿವರ್ತನೆಗೆ ಶ್ರಮಿಸೋಣ

ಶಿರಸಿ: ಹಿಂದೂಗಳು ಜಾತಿಗಳ ಹೆಸರಿನಲ್ಲಿ ಬೇರ್ಪಡಬಾರದು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡಿ ರಾಷ್ಟ್ರದ ಪರಿವರ್ತನೆಗೆ ನಾವೆಲ್ಲರೂ ನಿರಂತರವಾಗಿ ಶ್ರಮಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದರು.
ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಬನವಾಸಿ ಮಂಡಳದ ವತಿಯಿಂದ ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿ ಆಸ್ತಿತ್ವ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಶಕ್ತಿಶಾಲಿಯಾಗಿ ನಿಂತಿದ್ದು, ದೇಶ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದೆ. ಧರ್ಮಕ್ಕೆ ಜಾತಿಯ ಬಣ್ಣವನ್ನು ಹಚ್ಚುವುದರಿಂದ ನಮ್ಮ ನಮ್ಮಲ್ಲಿ ಕಲಹ ಉಂಟಾಗುತ್ತಿದೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಹಿಂದೂ , ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕಾಗಿದೆ. ಇಂತಹ ಹಿಂದೂ ಸಮ್ಮೇಳನದ ಮೂಲಕ ಸಮಾಜಘಾತುಕ ಶಕ್ತಿಯನ್ನು ಎದುರಿಸುವ ಶಕ್ತಿ ಪಡೆದುಕೊಳ್ಳೋಣ ಎಂದರು.
ದಿಕ್ಸೂಚಿ ಭಾಷಣಕಾರರಾಗಿ ಕರ್ನಾಟಕ ಉತ್ತರ ಪ್ರಾಂತದ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿ, ಪಂಚ ಪರಿವರ್ತನೆ, ಹಿಂದುತ್ವದ ವಿಸ್ತರಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸುವುದು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವುದು ಹಿಂದೂ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಹಿಂದೂ ಸಮ್ಮೇಳನದಿಂದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಭೋಧನ, ನಾಗರಿಕ ಕರ್ತವ್ಯ, ಪರಿಸರ ಜಾಗೃತಿ ಹಾಗೂ ಸ್ವಾವಲಂಬನೆ ಮೂಲಕ ರಾಷ್ಟ್ರೀಯ ಪರಿವರ್ತನೆಯನ್ನು ಕೇಂದ್ರೀಕರಿಸಲಾಗುತ್ತದೆ ಎಂದರು.
ಜಡೆ ಸಂಸ್ಥಾನಮಠದ ಡಾ. ಮಹಾಂತ ಸ್ವಾಮಿಜಿ ಆಶೀರ್ವಚನ ನೀಡಿ, ಭಾರತ ಜಗತ್ತಿಗೆ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಿದ ದೇಶವಾಗಿದೆ. ಹಿಂದೂ ಸಮಾಜದ ಸಂಘಟನೆಗೆ ಆರ್‌ಎಸ್‌ಎಸ್ ಮಾಡುತ್ತಿರುವ ಕಾರ್ಯ ಶ್ಲಾಘನಾರ್ಹವಾಗಿದೆ ಎಂದರು.
ಹಿಂದು ಸಂಚಲನಾ ಸಮಿತಿಯ ತಾಲೂಕು ಸಂಚಾಲಕ ಶ್ರೀಕಾಂತ್ ಶೆಟ್ಟಿ, ಹಿಂದೂ ಸಮ್ಮೇಳನ ಸಂಚಲನಾ ಸಮಿತಿಯ ಬನವಾಸಿ ಮಂಡಲದ ಅಧ್ಯಕ್ಷ ಸತೀಶ ಕೆರೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದದಲ್ಲಿ ಸಚಿನ್ ಮಾಳವದೆ ಪ್ರಸ್ತಾವಿಕ ಮಾತನಾಡಿದರು. ಶ್ರೀಧರ ಭಟ್, ಸಾಯಿರಾಮ ಕಾನಳ್ಳಿ, ಭಾನುರಾಜ ಮಂಗಳೂರು, ಅರವಿಂದ ಬಳೆಗಾರ ಇತರರಿದ್ದರು. ಇದಕ್ಕೂ ಮುನ್ನ ಆಕರ್ಷಕ ಶೋಭಾ ಯಾತ್ರೆ ನಡೆಯಿತು.