ಸಿದ್ದಾಪುರ ತಾಲೂಕಿನ ತಾರೇಹಳ್ಳಿ-ಕಾನಸೂರು ಸಂಘದಲ್ಲಿ ಆಯೋಜಿಸಿದ್ದ ಆಧುನಿಕ ಕೃಷಿ ಕಾರ್ಯಾಗಾರದಲ್ಲಿ ಶಿವಾನಂದ ಕಳವೆ ಮಾತನಾಡಿದರು. ಗುರುನಾಥ ಹೆಗಡೆ, ಸುಜಯ್ ಭಟ್, ಸೀಮಾ ಭಟ್ಟ, ಹರಿನಾರಾಯಣ ಭಟ್ಟ ಇತರರಿದ್ದರು. 
ಉತ್ತರ ಕನ್ನಡ

Sub-crops ಉಪ ಬೆಳೆಗಳತ್ತ ಒಲವು ಮೂಡಲಿ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಕೃಷಿ ಮಾಹಿತಿ ಕಾರ್ಯಾಗಾರ
  • ಗುರುನಾಥ ಗೋಪಾಲಕೃಷ್ಣ ಹೆಗಡೆ ದೇವಿಸರ ಆಶಯ
ಸಿದ್ದಾಪುರ: ತಾಲೂಕಿನ ತಾರೇಹಳ್ಳಿ-ಕಾನಸೂರು ಸೇವಾ ಸಹಕಾರಿ ಸಂಘದಲ್ಲಿ ಆಧುನಿಕ ಕೃಷಿ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಗುರುನಾಥ ಗೋಪಾಲಕೃಷ್ಣ ಹೆಗಡೆ ದೇವಿಸರ ಮಾತನಾಡಿ, ಎಲೆ ಚುಕ್ಕಿ ರೋಗದಿಂದ ಅಡಿಕೆ ಬೆಳೆ ಕಡಿಮೆಯಾಗುತ್ತಿದೆ ಹಾಗೂ ಅಡಿಕೆ ಬೆಳೆಯ ಕ್ಷೇತ್ರದ ವಿಸ್ತೀರ್ಣ ಏರಿಕೆಯಾಗುತ್ತಿರುವುದರಿಂದ ಸಂಘದ ಸದಸ್ಯರು ಹಾಗೂ ರೈತರು ಉಪ ಬೆಳೆಗಳನ್ನು ಬೆಳೆಯುವುದು ಸೂಕ್ತ. ಉಪಬೆಳೆಗಳಿಗೆ ಉತ್ತೇಜನ ನೀಡಲು ಸಂಘದಲ್ಲಿ ಅಡಿಕೆ ವಿಕ್ರಿ ಮಾಡಿದ ಸದಸ್ಯರಿಗೆ ವಿಕ್ರಿ ರಿಬೇಟ್ ರೂಪದಲ್ಲಿ ಕಾಫಿ ಹಾಗೂ ಮೆಣಸಿನಬಳ್ಳಿಗಳನ್ನು ನೀಡಲಾಗುತ್ತಿದೆ. ಸಂಘದ ಕೃಷಿ ಸಲಹೆಗಾರರಾಗಿ ಸುಜಯ್ ಭಟ್ ಹೊಸಳ್ಳಿ ಅವರನ್ನು ನೇಮಿಸಿಕೊಳ್ಳಲಾಗಿದ್ದು, ಅವರಿಂದ ತೋಟ ನಿರ್ವಹಣೆ ಹಾಗೂ ಬೆಳೆಗಳ ಆಧುನಿಕ ತಂತ್ರಜ್ಞಾನ, ಔಷಧ, ಗೊಬ್ಬರಗಳ ಸಂಪೂರ್ಣ ಮಾಹಿತಿ ಪಡೆದು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅಡಿಕೆ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ, ಯಂತ್ರಗಳ ಅಳವಡಿಕೆ ಹಾಗೂ ಅಡಿಕೆ ಬೆಳೆಯಲ್ಲಿ ರೋಗ ನಿಯಂತ್ರಣ ಮತ್ತು ಅಗತ್ಯ ಪೋಷಕಾಂಶ ನಿರ್ವಹಣೆ ಕುರಿತು ಮಾದೇವ ಹೆಗಡೆ ಗಡಿಕೈ ಮಾಹಿತಿ ನೀಡಿದರು.
ಸುಜಯ್ ಭಟ್ ಹೊಸಳ್ಳಿ ಕಾಫಿ ಹಾಗೂ ಕಾಳುಮೆಣಸು ಬೆಳೆಯುವ ವಿಧಾನ, ಗಿಡಗಳ ನಿರ್ವಹಣೆ ಹಾಗೂ ಅಗತ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಸೂಕ್ತ ಮಾಹಿತಿ ನೀಡಿದರು. ಸೀಮಾ ಭಟ್ ಹೊಸಳ್ಳಿ ಮಾತನಾಡಿ, ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಉಂಟುಮಾಡುವ ವಿಧಾನಗಳ ಬಗ್ಗೆ ವಿವರಿಸಿದರು.
ಬೆಟ್ಟದ ಹಕ್ಕುಗಳ ಜಾಗೃತಿ ಕುರಿತು ಬರಹಗಾರ ಶಿವಾನಂದ ಕಳವೆ ಅವರು ಭಾಗಾಯತಕ್ಕೆ ಬೆಟ್ಟದ ಸೌಲಭ್ಯ ಬಂದ ಹಿನ್ನೆಲೆ, ಬೆಟ್ಟದ ಹಕ್ಕುಗಳು, ಬೆಟ್ಟದ ಬಗ್ಗೆ ಇರಬೇಕಾದ ದಾಖಲೆಗಳು, ಎದುರಾಗುತ್ತಿರುವ ಸಮಸ್ಯೆ ಹಾಗೂ ಅದನ್ನು ಎದುರಿಸುವ ರೀತಿ ಬಗ್ಗೆ ಮಾಹಿತಿ ನೀಡಿದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಹರಿನಾರಾಯಣ ಗಣಪತಿ ಭಟ್ ಜಿಗಳೆಮನೆ, ಮುಖ್ಯಕಾರ್ಯನಿರ್ವಾಹಕ ವಿನಾಯಕ ನಾರಾಯಣ ಹೆಗಡೆ ಹಾಗೂ ನಿರ್ದೇಶಕ ಶ್ರೀಪಾದ ವೆಂಕಟ್ರಮಣ ಹೆಗಡೆ ಮಾದನಕಳ ಕಾರ್ಯಕ್ರಮ ನಿರ್ವಹಿಸಿದರು.