ಶಿರಸಿಯಲ್ಲಿ ನ. 23ರಂದು ಆಯೋಜಿಸಿರುವ ರಾಜ್ಯ ಮಟ್ಟದ ವಿಚಾರ ಸಂಕಿರಣದ (river diversion)ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗೋಪಾಲಕೃಷ್ಣ ವೈದ್ಯ, ಅನಂತ ಅಶೀಸರ, ಎಂ. ಎನ್. ಭಟ್, ವಿ.ಎನ್. ಹೆಗಡೆ, ವಿ.ಎಂ. ಹೆಗಡೆ, ಕೇಶವ ಕೊರ್ಸೆ ಇತರರಿದ್ದರು. 
ಉತ್ತರ ಕನ್ನಡ

river diversion ‘ನದಿ ತಿರುವು’ ವಿರೋಧದ ಧ್ವನಿ ಹೊರಹೊಮ್ಮಲಿ

ಶಿರಸಿ: ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು (river diversion) ಯೋಜನೆಗಳ ವಿರೋಧಿಸಿ ಪಶ್ಚಿಮ ಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮಗಳ ಕುರಿತು ನ.23 ರಂದು ನಗರದ ಟಿ.ಎಸ್.ಎಸ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲೆಯಾದ್ಯಂತ ಧ್ವನಿ ಹೊರ ಹೊಮ್ಮಬೇಕಿದೆ. ಸಂಘಟಿತರಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಈ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ನ.23 ರಂದು ಬೆಳಗ್ಗೆ 10.45ಕ್ಕೆ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಪರಿಸರಶಾಸ್ತ್ರ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ, ನೀರಾವರಿ ತಜ್ಞ ಡಾ.ರಾಜೇಂದ್ರ ಪೋದ್ದಾರ್, ಭೂಗರ್ಭಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಉಪಸ್ಥಿತರಿರುವರು.
ಸಂಜೆ 4.30 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಪರಿಸರ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಪರಿಸರ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ.
ಪಶ್ಚಿಮ ಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮಗಳ ಕುರಿತು ವಿಚಾರ ಸಂಕಿರಣ ಗೋಷ್ಠಿಗಳು ನಡೆಯಲಿದೆ. ಉಕ ಜಿಲ್ಲೆಯ ನದಿಕಣಿವೆ ಪರಿಸರದ ಮಹತ್ವದ ಕುರಿತು ಬೆಳಗ್ಗೆ 10 ರಿಂದ 10.45 ವರೆಗೆ ಡಾ.ಟಿ.ವಿ.ರಾಮಚಂದ್ರ ದಿಕ್ಸೂಚಿ ಉಪನ್ಯಾಸ ನೀಡಲಿದ್ದು, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಅಧ್ಯಕ್ಷತೆ ವಹಿಲಿದ್ದಾರೆ.
ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಉಪಸ್ಥಿತರಿರುವರು. ಬಯಲುನಾಡಿನ ನೀರಾವರಿ ಯೋಜನೆಗಳ ಪ್ರಸಕ್ತ ಪರಿಸ್ಥಿತಿ ಕುರಿತು ಒಳನಾಡಿನ ನೀರಾವರಿ ತಜ್ಞ ಡಾ.ರಾಜೇಂದ್ರ ಪೋದ್ದಾರ್, ನೈಸರ್ಗಿಕ ಅವಘಡಗಳು ಮತ್ತು ನಿಯಂತ್ರಣದ ಕುರಿತು ಭೂಗರ್ಭಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ, ಎತ್ತಿನಹೊಳೆ ಯೋಜನೆ: ಸ್ಥಳೀಯರ ಅನುಭವದ ಕುರಿತು ಪರಿಸರ ಹೋರಾಟಗಾರ ಕಿಶೋರಕುಕಾರ ಹೊಂಗಡಹಳ್ಳ ಉಪನ್ಯಾಸ ನೀಡಲಿದ್ದಾರೆ ಎಂದರು.
ಮಲೆನಾಡಿನ ಉಭಯವಾಸಿ ಜೀವಿ ಪರಿಸರದ ಮಹತ್ವದ ಕುರಿತು ವಿಜ್ಞಾನಿ ಡಾ.ಅಮಿತ ಹೆಗಡೆ, ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತು ಡಾ.ಗಿರೀಶ ಜನ್ನೆ, ಶರಾವತಿ ನದಿ ಕೆಳಹರಿವಿನ ಸಮಸ್ಯೆಗಳ ಕುರಿತು ಡಾ.ಪ್ರಕಾಶ ಮೇಸ್ತ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ಕುರಿತು ಡಾ.ಬಾಲಚಂದ್ರ ಸಾಯೀಮನೆ, ಬೇಡ್ತಿ-ವರದಾ ನದಿ ತಿರುವು ಯೋಜನೆ ಕುರಿತು ಡಾ.ನರಸಿಂಹ ಹೆಗಡೆ ವಾನಳ್ಳಿ, ಕೇಣಿ ಬಂದರು ಯೋಜನೆ ಕುರಿತು ವಿಕಾಸ ತಾಂಡೇಲ ಮಾಹಿತಿ ನೀಡಲಿದ್ದಾರೆ.ಕಡಲಜೀವಶಾಸ್ತ್ರಜ್ಞ ಡಾ.ವಿ.ಎನ್.ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಒಳನಾಡಿನ ಸುಸ್ಥಿರ ನೀರಾವರಿ ಕುರಿತು ಶಿವಾನಂದ ಕಳವೆ, ಕಾನೂನಿನ ದಾರಿಗಳ ಸಾಧ್ಯತೆ ಕುರಿತು ಗಿರಿಧರ ಕುಲಕರ್ಣಿ ಬೆಳಗಾವಿ, ಕೆ.ಎಂ.ಹೆಗಡೆ ಭೈರುಂಬೆ, ನೀರಾವರಿ ವರದಿ ಕುರಿತು ಡಾ.ಜಿ.ವಿ.ಹೆಗಡೆ ಹುಳಗೋಳ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್.ಭಟ್ಟ, ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ರತ್ನಾಕರ ಬಾಡಲಕೊಪ್ಪ, ಕೇಶವ ಕೊರ್ಸೆ, ವಿ.ಎಂ. ಹೆಗಡೆ ತ್ಯಾಗಲಿ, ಶಿವಾನಂದ ಕಳವೆ, ಗಣಪತಿ ಬಿಸಲಕೊಪ್ಪ, ಟಿಎಸ್‌ಎಸ್ ಮುಖ್ಯ ಕಾರ್ಯನಿರ್ವಾಹಕ ಗಿರೀಶ ಹೆಗಡೆ ಮತ್ತಿತರರು ಇದ್ದರು.