ಗೋಕರ್ಣ ಬಳಿಯ ಹಿರೇಗುತ್ತಿ ಸರ್ಕಾರಿ ಹಿ.ಪ್ರಾ. ಶಾಲೆ ಶತಮಾನೋತ್ತರ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಡಿಡಿಪಿಐ ಲತಾ ನಾಯಕ, ಶಿಕ್ಷಣಾಧಿಕಾರಿ ಶುಭಾ ನಾಯಕ, ಬಿಇಒ ಉದಯ ನಾಯ್ಕ, ಹೊನ್ನಪ್ಪ ನಾಯಕ, ಶಾಂತ ನಾಯಕ, ವಿವೇಕಾನಂದ ಕವರಿ, ಎನ್.ಬಿ. ಗಾಂವಕರ ಮತ್ತಿತರರಿದ್ದರು.
- ಶಾಸಕ ದಿನಕರ ಶೆಟ್ಟಿ ಹೇಳಿಕೆ
- ಹಿರೇಗುತ್ತಿಯ ಸರ್ಕಾರಿ ಶಾಲೆ ಶತಮಾನೋತ್ತರ ಸಮಾರಂಭ
ಗೋಕರ್ಣ: ಶಾಲೆ, ಕಾಲೇಜ್ ಇತ್ಯಾದಿ ಶಿಕ್ಷಣ ಸಂಸ್ಥೆಗಳು ಯಾವತ್ತೂ ರಾಜಕೀಯ ಮುಕ್ತವಾಗಿರಬೇಕು. ವಿದ್ಯಾ ಸಂಸ್ಥೆಗಳಲ್ಲಿ ಎಂದೂ ವೋಟಿನ ರಾಜಕೀಯ ಮಾಡಬಾರದು. ಇಂತಹ ಚಟುವಟಿಕೆಗಳನ್ನು ನನ್ನ ಕ್ಷೇತ್ರದಲ್ಲಿ ಕೆಲವರು ಮಾಡುವ ಮೂಲಕ ಕುಮಟಾದಲ್ಲಿನ ಒಳ್ಳೆಯ ವಾತಾವರಣವನ್ನು ಕೆಡಿಸುವಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬರಬಹುದು ಎಂದು ಶಾಸಕ ದಿನಕರ ಶೆಟ್ಟಿ ವಿಷಾದಿಸಿದರು.
ಹತ್ತಿರದ ಹಿರೇಗುತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ಹಿನ್ನೆಲೆಯನ್ನು ವಿವರಿಸಿದ ಶಾಸಕರು ಈ ಕಾಲೇಜ್‌ನ ವಿದ್ಯಾರ್ಥಿಗಳನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ರಾಜಕೀಯ ಹಿತಾಸಕ್ತಿ ಹೊಂದಿರುವ ಕೆಲವರು ಕೈಗೊಂಡಿರುವುದು ಮತ್ತು ವಿದ್ಯಾರ್ಥಿಗಳ ಎದುರು ಇವರು ಪ್ರಾಚಾರ್ಯರೋರ್ವರಿಗೆ ಶೇಮ್ ಶೇಮ್ ಎಂದು ಘೋಷಿಸಿರುವುದು ನಿಜಕ್ಕೂ ಗೌರವ ತರುವಂತಹದ್ದಲ್ಲ. ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಉನ್ನತ ಸ್ಥಾನದಲ್ಲಿರುವವರು. ಜನಪ್ರತಿನಿಧಿ ಆಗ ಬಯಸುವವರು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವ ಮೂಲಕ ಈ ಬಗೆಯಲ್ಲಿ ಜನರನ್ನು ಪ್ರತಿನಿಧಿಸಲು ಮುಂದಾಗುವುದು ಒಳ್ಳೆಯದಲ್ಲ. ಇವತ್ತು ಶಿಕ್ಷಣ ಕ್ಷೇತ್ರ ಕೂಡ ಪೈಪೋಟಿಯಿಂದ ಹೊರತಾಗಿಲ್ಲ. ಇಂತಹ ಕಾಲೇಜ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ, ಅಲ್ಲಿನ ವಾತಾವರಣ ಸರಿ ಇಲ್ಲ ಎಂದು ಮುಂದಿನ ದಿನಗಳಲ್ಲಿ ಈ ಕಾಲೇಜ್‌ಗೆ ಬರಲು ಉಪನ್ಯಾಸಕರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗುವ ಅಪಾಯಗಳಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವ ಪ್ರವೃತ್ತಿಯ ಅಗತ್ಯ ಬಹಳವಿದೆ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಉಪ ನಿರ್ದೇಶಕಿ ಲತಾ ಎಂ.ನಾಯಕ ಮಾತನಾಡಿ, ವರ್ತಮಾನದಲ್ಲಿ ಪ್ರತಿ ನಿತ್ಯ ಅತ್ಯಂತ ವೇಗವಾಗಿ ತಂತ್ರಜ್ಞಾನಗಳು ಆಧುನಿಕಗೊಳ್ಳುತ್ತಿವೆ. ಇಂತಹ ದಿನಗಳಲ್ಲಿ ಶಾಲೆಗಳು ಕೂಡ ಅದೇ ವೇಗದಲ್ಲಿ ಅವುಗಳನ್ನು ಅಳವಡಿಸಿಕೊಂಡು ನೂತನ ಭವಿಷ್ಯ ರೂಪಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ತಾಪಂ ಇಒ ರಾಜೇಂದ್ರ ಭಟ್ಟ, ಸ್ಥಳೀಯ ಮಹಾತ್ಮ ಗಾಂಧಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೊನ್ನಪ್ಪ ನಾಯಕ, ಶಿಕ್ಷಣಾಧಿಕಾರಿ ಶುಭಾ ಎನ್. ನಾಯಕ, ಮುಡಿಪು ಸಂಸ್ಥೆ ಅಧ್ಯಕ್ಷ ಮಂಜುನಾಥ ರೇವಣಕರ್, ಇಂಜಿನಿಯರ್ ಶ್ರೀಕಾಂತ ಎನ್. ನಾಯಕ, ಶತಮಾನೋತ್ತರ ಸಮಿತಿ ಅಧ್ಯಕ್ಷ ವಿವೇಕಾನಂದ ಕವರಿ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಶತಮಾನೋತ್ತರ ಸಮಿತಿ ಗೌರವಾಧ್ಯಕ್ಷ ಶಾಂತ ಎನ್. ನಾಯಕ, ನಿವೃತ್ತ ಶಿಕ್ಷಕರಾದ ಬೀರಣ್ಣ ಎಂ. ನಾಯಕ, ಮೋಹನ ಯು. ಗಾಂವಕರ, ವಾಸುದೇವ ಎನ್. ನಾಯಕ, ಯುವಕ ಸಂಘದ ಅಧ್ಯಕ್ಷ ಆಕಾಶ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಸಮಿತಿ ಕಾರ್ಯಾಧ್ಯಕ್ಷ ನೀಲಪ್ಪ ಗೌಡ, ಉಪಾಧ್ಯಕ್ಷರಾದ ಲೋಕೇಶ ನಾಯ್ಕ, ಬೊಮ್ಮಯ್ಯ ನಾಯಕ, ಸಹಕಾರ್ಯದರ್ಶಿಗಳಾದ ವೆಂಕಟ್ರಾಯ ನಾಯಕ, ಗೌರೀಶ ನಾಯಕ ಕೆಂಚನ್, ಎಸ್‌ಡಿಎಂಸಿ ಅಧ್ಯಕ್ಷ ಮಾದೇವ ಪಟಗಾರ ಇತರರಿದ್ದರು.
ಶಾಲಾ ಮುಖ್ಯಾಧ್ಯಾಪಕ ಎನ್.ಬಿ. ಗಾಂವಕರ(ಆನಂದ) ಸ್ವಾಗತಿಸಿದರು. ಪತ್ರಕರ್ತ ಸುಭಾಷ ಕಾರೇಬೈಲ್ ನಿರ್ವಹಿಸಿದರು. ಸಮಿತಿಯ ಕೋಶಾಧ್ಯಕ್ಷ ಉದ್ದಂಡ ಗಾಂವಕರ ವಂದಿಸಿದರು.