ಹೊನ್ನಾವರದಲ್ಲಿ ರಾಮಕ್ಷತ್ರಿಯ ಸಮಾಜದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಎರಡನೇ ಸಭಾಭವನವನ್ನು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಮೋಹನ ಸಾಳೇಹಿತ್ತಲ, ಭವಾನಿಶಂಕರ ಕಾಣಕೋಣಕರ ರಾಜು ನಾಯ್ಕ ಇತರರಿದ್ದರು.
ಹೊನ್ನಾವರ: ಮನಸ್ಸಿನ ಶಾಂತಿ ಬಹಳ ಮುಖ್ಯವಾದುದು. ಆಸೆಯನ್ನು ಬೆನ್ನತ್ತಿ ಹೋಗುವವರು ಶಾಂತಿಯನ್ನು ಪಡೆಯುವುದಿಲ್ಲ. ದೇವರ ಧ್ಯಾನದಿಂದ ಬರುವ ಶಾಂತಿ ಯಾವುದರಿಂದಲೂ ಬರುವುದಿಲ್ಲ. ಕಟ್ಟಡ ನಿರ್ಮಾಣದ ಜತೆಗೆ ಸಮಾಜದ ನಿರ್ಮಾಣವೂ ಆಗಬೇಕು ಎಂದು ಸ್ವರ್ಣವಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದರು.
ಪಟ್ಟಣದ ದುರ್ಗಾಕೇರಿಯಲ್ಲಿ ರಾಮಕ್ಷತ್ರಿಯ ಸಮಾಜದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಎರಡನೇ ಸಭಾಭವನವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಹೃದಯ ಶ್ರೀಮಂತಿಕೆ ಇರುವ ಜನರ ಸಹಕಾರ ಮತ್ತು ಸಮಾಜ ಮುಖಂಡರ ದಕ್ಷತೆಯಿಂದ ಈ ಸಭಾಭವನ ಉತ್ತಮವಾಗಿ ರೂಪುಗೊಂಡಿದೆ. ಸಭಾಭವನ ಲೋಕಾರ್ಪಣೆಗೊಂಡಿರುವುದರಿಂದ ಸಮಾಜದ ಸಂಘಟನೆ ಮತ್ತು ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚುತ್ತದೆ. ಅಶಾಸ್ತ್ರೀಯ ವಿವಾಹಗಳು, ವಿವಾಹ ವಿಚ್ಚೇದನಗಳು ಹೆಚ್ಚುತ್ತಿದ್ದು, ಇದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಮಕ್ಕಳಿಗೆ ತಾಯಿ ತಂದೆಯರ ಪ್ರೀತಿ ಸಿಕ್ಕರೆ ಉತ್ತಮ ಪ್ರಜೆಯಾಗುತ್ತಾರೆ. ಕೆಟ್ಟ ಹವ್ಯಾಸ ಅಂಟಿಕೊಂಡವರು ದುರ್ಗತಿ ಹೊಂದುತ್ತಾರೆ ಎಂದರು.
ಗಂಗಾವಳಿ ನದಿ ತಿರುವು ಯೋಜನೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತ ಆಗುತ್ತದೆ. ಅಂತರ್ಜಲ ಕೆಳಕ್ಕೆ ಹೋಗುತ್ತದೆ. ಹೀಗಾಗಿ ಇಂಥ ಯೋಜನೆಗಳನ್ನು ತಡೆಯುವಲ್ಲಿ ಎಲ್ಲರು ಸಕ್ರಿಯರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಅಧ್ಯಕ್ಷ ಮೋಹನ ಸಾಳೇಹಿತ್ತಲ ಮಾತನಾಡಿ, ಗುರುಗಳ ಮಾರ್ಗದರ್ಶನದಿಂದ, ದಾನಿಗಳ ಉದಾರ ದೇಣಿಗೆಯಿಂದ ಸಂಘಟಕರ ಶ್ರಮದಿಂದ ಸಭಾಭವನ ನಿರ್ಮಾಣಗೊಂಡಿದೆ. ಸಮಾಜದಿಂದ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದರು.
ರಾಮಕ್ಷತ್ರಿಯ ಸಮಾಜ ಮುಖಂಡರಾದ ಭವಾನಿಶಂಕರ ಕಾಣಕೋಣಕರ, ವೆಂಕಟೇಶ ಸಾಳೇಹಿತ್ತಲ, ಆರ್‌ಎಫ್‌ಒ ರಾಜು ಅಣ್ಣಪ್ಪ ನಾಯ್ಕ, ಕೃಷ್ಣ ಗೋವಿಂದ ನಾಯ್ಕ, ನಾರಾಯಣ ಶಿವ ನಾಯ್ಕ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು. ಶ್ರೀಕಾಂತ ನಾಯ್ಕ ಸ್ವಾಗತಿಸಿದರು. ರಾಜೇಶ ಸಾಳೇಹಿತ್ತಲ ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ನಾಯ್ಕ ವಂದಿಸಿದರು. ಪ್ರೇಮಕಾಂತ ನಾಯ್ಕ ಮತ್ತು ನಾರಾಯಣ ನಾಯ್ಕ ನಿರ್ವಹಿಸಿದರು.