ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ (Kannada) ಸಮ್ಮೇಳನವನ್ನು ಡಾ. ಸಿ. ಸೋಮಶೇಖರ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ. ಕಾ. ರಾಮೇಶ್ವರಪ್ಪ, ವಿನಾಯಕ ಹೆಗಡೆ, ಮಂಜುನಾಥ ಸಾಗರ್, ರೋಹಿದಾಸ ನಾಯಕ, ಪ್ರಮೋದ ನಾಯ್ಕ ಇತರರು ಇದ್ದರು.
- ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಆಶಯ
- ಕನ್ನಡ ಸಂಸ್ಕೃತಿ ಸಮ್ಮೇಳನ ಉದ್ಘಾಟನೆ
- ಸಂಶೋಧಕ ಡಾ. ಕಾ.ರಾಮೇಶ್ವರಪ್ಪ ಸರ್ವಾಧ್ಯಕ್ಷತೆ
ಕುಮಟಾ: ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಲು ಪ್ರತಿಯೊಬ್ಬ ಕನ್ನಡಿಗನೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರಮಿಸಬೇಕು.
ಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿ ಉಳಿಸದೆ, ಓದು, ಬರಹ, ಮಾತುಕತೆ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಬಳಸಬೇಕು. ಮುಂದಿನ ಪೀಳಿಗೆಗೆ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಎಲ್ಲರ ಜವಾಬ್ದಾರಿ ಎಂದು ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.
ನಾದಶ್ರೀ ಕಲಾ ಕೇಂದ್ರದಲ್ಲಿ ಭಾನುವಾರ ದಿ. ಎನ್.ಆರ್. ನಾಯಕ ಸ್ಮರಣಾರ್ಥ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-2026 (Kannada) ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡಕ್ಕಾಗಿ ಪರಿಷತ್ತಿನಿಂದ ಕೈಗೊಂಡಿರುವ ವಿವಿಧ ಚಟುವಟಿಕೆಗಳನ್ನು ವಿವರಿಸಿದ ಅವರು, ಮುಂದೆಯೂ ಹಲವು ಕನ್ನಡಪರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ಸಮ್ಮೇಳನಾಧ್ಯಕ್ಷ ಮೈಸೂರಿನ ಖ್ಯಾತ ಕವಿ, ಗಾಯಕ ಹಾಗೂ ಸಂಶೋಧಕ ಡಾ. ಕಾ.ರಾಮೇಶ್ವರಪ್ಪ (ಸಿರಿಗಂಧ) ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಜನಮನಗಳನ್ನು ಬೆಸೆಯುವ ಸೇತುವೆಗಳಾಗಿವೆ.
ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಭಾಷೆ, ಕಲೆ, ಸಾಹಿತ್ಯ, ಜಾನಪದ, ಸಂಪ್ರದಾಯ ಹಾಗೂ ಮೌಲ್ಯಗಳ ವೈವಿಧ್ಯವನ್ನು ಒಳಗೊಂಡಿದೆ ಎಂದರು.
ಉತ್ತರ ಕನ್ನಡದ ಪ್ರಕೃತಿ, ಜೀವವೈವಿಧ್ಯ, ಜನಪದ, ಕಲೆ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರಸ್ತಾಪಿಸಿದರು.
ಕುಮಟಾದ ಸಾಹಿತ್ಯಿಕ ಮಹತ್ವವನ್ನು ಸ್ಮರಿಸಿದ ಅವರು, 1955ರಲ್ಲಿ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುಮಟಾದಲ್ಲಿ ನಡೆದಿರುವುದು ಈ ನೆಲದ ಸಾಹಿತ್ಯಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸಿಎ. ವಿನಾಯಕ ಹೆಗಡೆ ಮಾತನಾಡಿದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುಟ್ಟು ಕುಲಕರ್ಣಿ, ಶ್ರೀಧರ ಬಳಗಾರ, ನಾಗರಾಜ ನಾಯ್ಕ ಕಾಗಾಲ, ಶಿವಸ್ವಾಮಿ ಎನ್.ಆರ್, ಭಾಷಾ ಪಟೇಲ್ ಹಾಗೂ ವಿಕ್ರಮ ಆರ್. ನಾಯ್ಕ ಅವರನ್ನು ಸಾಹಿತ್ಯ, ಸಂಶೋಧನೆ, ಸಂಘಟನೆ, ಸಮಾಜಸೇವೆ ಹಾಗೂ ಕಾನೂನು ಕ್ಷೇತ್ರಗಳ ಸಾಧನೆಗಾಗಿ ಸನ್ಮಾನಿಸಲಾಯಿತು.
ಪ್ರೊ. ಟಿ.ಜಿ. ಭಟ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಿ.ಆರ್. ನಾಯ್ಕ, ಎನ್.ಆರ್. ಗಜು, ರವೀಂದ್ರ ಭಟ್ ಸೂರಿ, ವೆಂಕಟೇಶ ಬೈಲೂರು, ಎಂ.ಕೆ. ಲಕ್ಷ್ಮೀ, ಸಂಧ್ಯಾ ಭಟ್, ಗಣಪತಿ ಕೊಂಡದಕುಳಿ, ನಾಗರಾಜ ನಾಯಕ ಹಾಗೂ ಮಮತಾ ನಾಯ್ಕ ಕವನ ವಾಚಿಸಿದರು.
ಸಾಹಿತಿ ರೋಹಿದಾಸ ನಾಯಕರ ಸೌಗಂಧಿಕ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಸಮ್ಮೇಳನಾಧ್ಯಕ್ಷ ಡಾ. ಕಾ. ರಾಮೇಶ್ವರಪ್ಪ ಅವರನ್ನು ಗೌರವಿಸಲಾಯಿತು. ಉದ್ಯಮಿ ಗಣಪತಿ ಭಾಗ್ವತ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂಬಾಶ್ರೀ ನತ್ಯ ಮತ್ತು ಸಂಗೀತ ಶಾಲೆಯಿಂದ ನತ್ಯ-ಗಾಯನ, ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ನಗೆ ಹೊನಲು, ಕುಮಟಾದ ನೃತ್ಯಸ್ವರ ಕಲಾಟ್ರಸ್ಟ್ ವತಿಯಿಂದ ವಿದುಷಿ ವಿಜೇತಾ ಭಂಡಾರಿ ನಿರ್ದೇಶನದ ನೃತ್ಯರೂಪಕ ಗಮನ ಸೆಳೆದವು.
ಮೈಸೂರಿನ ಶ್ರೀಸರಸ್ವತಿ ವಾದ್ಯವೃಂದದಿಂದ ‘ಲಯ-ನಾದ-ತರಂಗ ಸಂಗೀತ’ ಕಾರ್ಯಕ್ರಮ ಹಾಗೂ ಸಂತೆಬೆನ್ನೂರಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಿಂದ ಮಲ್ಲಕಂಬ ಪ್ರದರ್ಶನ ಪ್ರಶಂಸೆಗೆ ಪಾತ್ರವಾಯಿತು.
ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಮಂಜುನಾಥ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಎಂ. ಕುಲಶೇಖರ ನಿರೂಪಿಸಿದರು. ಕಸಾಪ ತಾಲೂಕು ಅಧ್ಯಕ್ಷ ಪ್ರಮೋದ ನಾಯ್ಕ ವಂದಿಸಿದರು.
ಕನ್ನಡ ಭಾಷೆ, ಸಾಹಿತ್ಯ, ಜನಪದ, ಸಂಗೀತ, ನತ್ಯ, ಹಾಸ್ಯ ಮತ್ತು ಕಾವ್ಯದ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವು ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂಬ ಸಂದೇಶ ಸಾರಿತು.