ಸಿದ್ದಾಪುರದ ಬಾಲಭವನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿಯನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು. ರಮೇಶ ಹೆಗಡೆ, ಕೆ.ಜಿ. ನಾಯ್ಕ, ಕೆ.ಜಿ. ನಾಗರಾಜ, ವಿ.ಎನ್. ನಾಯ್ಕ, ದೇವರಾಜ ಹಿತ್ಲಲಕೊಪ್ಪ, ಮಹ್ಮದ್ ಯಾಕೂಬ್ ಶೇಖ್ ಇತರರಿದ್ದರು.  
ಉತ್ತರ ಕನ್ನಡ

ಪ್ರತಿಯೊಬ್ಬರೂ ಶರಣರ ತತ್ವಾದರ್ಶ ಅಳವಡಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಣ್ಣ ನಾಯ್ಕ ಸಲಹೆ
  • ನುಲಿಯ ಚಂದಯ್ಯ ಜಯಂತ್ಯುತ್ಸವ

ಸಿದ್ದಾಪುರ:

ಮಹಾಪುರುಷರು ಮತ್ತು ಶರಣರ ತತ್ವಾದರ್ಶಗಳು ಸಾರ್ವಕಾಲಿಕವಾಗಿದೆ. ಅವರು ತೋರಿದ ಸಮಾನತೆ ಹಾಗೂ ಕಾಯಕ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಪಟ್ಟಣದ ಬಾಲಭವನದಲ್ಲಿ ತಾಲೂಕಾಡಳಿತ, ತಾಪಂ, ಪಪಂ ಹಾಗೂ ತಾಲೂಕು ನಾಮಧಾರಿ ಸಮಾಜದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜದಲ್ಲಿದ್ದ ಅಸ್ಪ್ರಶ್ಯತೆ ಹಾಗೂ ಅಸಮಾನತೆಯ ವಿರುದ್ಧ ಶಿಕ್ಷಣ ಮತ್ತು ಅಧ್ಯಾತ್ಮದ ಮೂಲಕ ಕ್ರಾಂತಿ ಮಾಡಿದವರು. ಶಿಕ್ಷಣದಿಂದ ಸಮಾಜದ ಸುಧಾರಣೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಕಾಯಕವೇ ಕೈಲಾಸ ತತ್ವಕ್ಕೆ ಬದ್ಧರಾಗಿ ಜೀವಿಸಿದ ಶರಣ ನುಲಿಯ ಚಂದಯ್ಯನವರು ಶ್ರಮ, ಸಂಸ್ಕೃತಿಗೆ ಸಾಟಿ ಇಲ್ಲದ ಗೌರವ ತಂದುಕೊಟಿದ್ದಾರೆ. ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗಿದೆ. ಇಂತಹ ಮಹಾಪುರುಷರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತ ಕನ್ನೇಶ ನಾಯ್ಕ ಕೋಲಸಿರ್ಸಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸ ನೀಡಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್, ವಿ.ಎನ್. ನಾಯ್ಕ, ತಾಪಂ ಇಒ ದೇವರಾಜ್ ಎಂ. ಹಿತ್ತಲಕೊಪ್ಪ, ಸಿಪಿಐ ಸೀತಾರಾಮ ಜೆ.ಬಿ., ಪಪಂ ಮುಖ್ಯಾಧಿಕಾರಿ ಮಹ್ಮದ್ ಯಾಕೂಬ್ ಶೇಖ್, ಇತರರು ಉಪಸ್ಥಿತರಿದ್ದರು.
ತಹಸೀಲ್ದಾರ್ ರಮೇಶ ಹೆಗಡೆ, ಅರುಣ ಸುಂಕತ್ತಿ ಹಾಗೂ ಜಿ.ಎಲ್. ಶಾಮಸುಂದರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ನಾರಾಯಣ ಗುರುಗಳ ರಥ ಯಾತ್ರೆ ಬಾಲಭವನದವರೆಗೆ ನಡೆಯಿತು.