ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
- ರಾಜ್ಯ, ಹೊರರಾಜ್ಯ ಹಾಗೂ ಹೊರ ದೇಶದವರಿದ್ದರೂ 7 ದಿನಗಳವರೆಗೆ ಉಚಿತ ಚಿಕಿತ್ಸೆ
- 15 ನಿಮಿಷದ ಒಳಗೆ ಆಂಬುಲೆನ್ಸ್ ತಲುಪದಿದ್ದರೆ 5 ಸಾವಿರ ರೂ. ದಂಡ
- ಆಹಾರ ಸುರಕ್ಷತಾ ಕಾಯ್ದೆಗೆ ಕಠಿಣ ನಿಯಮ
ಕಾರವಾರ:
ದೇಶ-ವಿದೇಶಗಳ ಅಥವಾ ಯಾವುದೇ ರಾಜ್ಯದ ವ್ಯಕ್ತಿ ಕರ್ನಾಟಕದಲ್ಲಿ ಅಪಘಾತಕ್ಕೆ
ಒಳಗಾದರೆ, ಅವರಿಗೆ ಮೊದಲ 7 ದಿನಗಳವರೆಗೆ 2.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ
ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಹೇಳಿದರು.
ಅವರು ಮಂಗಳವಾರ ಕುಮಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ ಜಿಲ್ಲೆ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಇವರ ಸಿ.ಎಸ್.ಆರ್. ನಿಧಿಯಲ್ಲಿ ನಿರ್ಮಿಸಿರುವ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಸಾರ್ವಜನಿಕರು ಅಸ್ಪತ್ರೆಗೆ ಸೇರಿಸಿದರೆ ಅವರ ಚಿಕಿತ್ಸಾ ವೆಚ್ಚ ಯಾರು ಪಾವತಿಸುವುದು ಎಂಬ ಯೋಚನೆಗೆ ಒಳಗಾಗಿ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಿ, ಅಪಘಾತವಾದ ವ್ಯಕ್ತಿಗೆ ತಕ್ಷಣ ಅಗತ್ಯ ತುರ್ತು ಚಿಕಿತ್ಸೆಗೆ ಒಳಪಡಿಸಿ ,ಆಸ್ಪತ್ರೆಗೆ ದಾಖಲಾದ ಮೊದಲ 7 ದಿನಗಳವರೆಗೆ ರೂ.2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಕರೆ ಮಾಡಿದ 15 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವಂತೆ ಹೊಸ ವ್ಯವಸ್ಥೆ ರೂಪಿಸಲಾಗುಗುತ್ತಿದ್ದು, ನಿಯಮಿತ ಸಮಯದಲ್ಲಿ ಆಂಬ್ಯುಲೆನ್ಸ್ ತಲುಪದಿದ್ದರೆ ಸಂಬಂಧಪಟ್ಟ ಆಂಬ್ಯುಲೆನ್ಸ್ ನಿರ್ವಹಣಾ ಸಂಸ್ಥೆಗೆ ರೂ. 3,000 ದಿಂದ 5,000 ದಂಡ ವಿಧಿಸುವ ಕಾಯ್ದೆ ತರಲಾಗುವುದು ಎಂದರು.
ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಅನಾರೋಗ್ಯ ತರುವ ಜಂಕ್ ಫುಡ್ ಸಿಗದಂತೆ ತಡೆಯಲು 'ಫುಡ್ ಸೇಫ್ಟಿ ಆಕ್ಟ್' ಅಡಿಯಲ್ಲಿ ಕಠಿಣ ನಿಯಮ ರೂಪಿಸಲಾಗುವುದು. ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಿ, ಕಲಬೆರಕೆ ಅಥವಾ ಕಳಪೆ ಆಹಾರ ಮಾರಾಟ ಮಾಡುವ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳಂತಹ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಉತ್ತಮ ಜೀವನಶೈಲಿ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಯ ಖಾಲಿ ಇರುವ ವೈದ್ಯರು, ನರ್ಸ್ಗಳು, ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳನ್ನು ಕಾಂಟ್ರಾಕ್ಟ್ ಹಾಗೂ ಖಾಯಂ ಆಧಾರದ ಮೇಲೆ ಭರ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕುಮಟಾದಲ್ಲಿ ಟ್ರಾಮಾ ಕೇರ್ ಸೆಂಟರ್ ಪ್ರಾರಂಭವಾಗಿರುವುದು ತುರ್ತು ಮತ್ತು ಎಮರ್ಜೆನ್ಸಿ ಸಮಯದಲ್ಲಿ ಜೀವ ಉಳಿಸಲು ಅತ್ಯಂತ ಅಗತ್ಯವಾಗಿದೆ. ಇದು ರಾಜ್ಯದ ಆರೋಗ್ಯ ಇಲಾಖೆಯಿಂದ ಪ್ರಾರಂಭಗೊAಡ 3ನೇ ಕೇಂದ್ರವಾಗಿದೆ. ಈ ಆಸ್ಪತ್ರೆಗೆ ಬೇಕಾಗುವ ಹೆಚ್ಚುವರಿ ಉಪಕರಣಗಳು ಮತ್ತು ಮೂಲಸೌಕರ್ಯಗಳಿಗೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಅವರು ಮಂಗಳೂರಿನ ಎ.ಜೆ ಆಸ್ಪತ್ರೆ. ಹಾಗೂ ಶ್ರೀನಿವಾಸ ಆಸ್ಪತ್ರೆಗಳು ಈ ಟ್ರಾಮಾ ಕೇರ್ ಸೆಂಟರ್ ಅನ್ನು ದತ್ತು ತೆಗೆದುಕೊಂಡು ಸೇವೆ ನೀಡಲು ಮನವಿ ಮಾಡಲಾಗುವುದು ಎಂದರು.
ಕುಮಟಾ ಆಸ್ಪತ್ರೆಯು ಹೆದ್ದಾರಿಯ ಬಳಿ ಇರುವ ಆಸ್ಪತ್ರೆಯಾದ್ದರಿಂದ, ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ಶವಾಗಾರಕ್ಕೆ
ಆಗಮಿಸುವ ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಫ್ಯಾನ್, ಬೆಳಕು, ಪೊಲೀಸ್ ಪಂಚನಾಮೆ ಕೊಠಡಿ, ವೈದ್ಯರ ಕೊಠಡಿ ಮತ್ತು ಫ್ರೀಜರ್ ಒಳಗೊಂಡ ಆಧುನಿಕ ಮಾರ್ಚುರಿ' ಕಟ್ಟಡ ನಿರ್ಮಿಸುವಂತೆ ಬಿ.ಇ.ಎಲ್. ಅಧಿಕಾರಿಗಳಿಗೆ ತಿಳಿಸಿದರು.ಆರೋಗ್ಯ ಸಚಿವನಾಗಿ ಹೆಚ್ಚು ಆಸ್ಪತ್ರೆಗಳನ್ನು ಕಟ್ಟುವುದು ಮಾತ್ರ ನನ್ನ ಉದ್ದೇಶವಲ್ಲ, ಜನರಿಗೆ ಆಸ್ಪತ್ರೆಯ ಅಗತ್ಯವೇ ಬರದಂತೆ ತಡೆಗಟ್ಟುವ ವಾತಾವರಣ ನಿರ್ಮಿಸುವುದು ನನ್ನ ಗುರಿ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈ ಟ್ರಾಮಾ ಕೇರ್ ಸೆಂಟರ್ ಯೂನಿಟ್‌ಗೆ ಸುಮಾರು ರೂ.2.73 ಕೋಟಿ ರೂಪಾಯಿ ವೆಚ್ಚದ ಅಗತ್ಯವಿತ್ತು. ಈ ಯೋಜನೆ ಸಾಕಾರಗೊಳ್ಳಲು ಬಿಇಎಲ್ ಸಂಸ್ಥೆಯು ರೂ. 2.73 ಕೋಟಿ ಅನುದಾನ ನೀಡುವ ಮೂಲಕ ಈ ಯೋಜನೆಗೆ ಬಲ ನೀಡಿದೆ.ಸ್ಥಳೀಯ ರೋಟರಿ ಕ್ಲಬ್ ಈ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು ರೂ. 1.70 ಕೋಟಿಗೂ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಸ್ಥಳೀಯರು ಮತ್ತು ಸಂಘ ಸಂಸ್ಥೆಗಳು ಕೂಡಾ ಈ ಆಸ್ಪತ್ರೆಗೆ ನೆರವು ನೀಡಿದ್ದು, ಈ ಆಸ್ಪತ್ರೆಯನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲು ಮತ್ತು ಅಗತ್ಯವಿರುವ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರನ್ನು ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್
ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಡಾ. ಪುಷ್ಪÀ್ಪ, ಹೆಚ್.ಎಮ್.ಡಿ.ಡಿ ಅಕ್ರಂ ಬಾಷಾ , ಡಿಎಚ್‌ಒ ಡಾ. ಸಂಜಯ್ ದೊಡ್ಡಮನಿ, ಬಿಇಎಲ್ ಸಂಸ್ಥೆ ನಿರ್ದೇಶಕ ರಜನೀಶ್ ಶರ್ಮಾ, ಜನರಲ್ ಮ್ಯಾನೇಜರ್‌ಗಳಾದ ಸಂಜಯ್ ಅಗರ್ವಾಲ್, ಟಿ.ಎನ್. ಸಿಂಗ್, ಡಿಪ್ಯೂಟಿ ಜನರಲ್ ಮ್ಯಾನೇಜರ್ ಡಾ. ಶಶಿಭೂಷಣ್, , ರೋಟರಿ ಅಧ್ಯಕ್ಷ ಡಾ. ವಿನಾಯಕ್ ಎಸ್ ಹೆಗಡೆ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ ಎಚ್, ಮತ್ತಿತರರು ಉಪಸ್ಥಿತರಿದ್ದರು.