ಕೊಂಕಣಿ ರಂಗ ಪರ್ಯಟನ ಉದ್ಘಾಟನೆ ನಡೆಯಿತು.  
ಉತ್ತರ ಕನ್ನಡ

ಕೊಂಕಣಿಗರ ಕಲೆಗೆ ಕುಂಚದ ಬೆಲೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್‌ 15 ರವರೆಗೆ 3 ಜಿಲ್ಲೆಗಳಲ್ಲಿ ಸಂಚಾರ
  • 6 ಕಲಾವಿದರಿಂದ 48 ಸಮುದಾಯದ ಚಿತ್ರಣ
ಕಾರವಾರ: ಚತ್ರ ಕೇವಲ ಕಣ್ಣಿಗೆ ಕಾಣುವ ದೃಶ್ಯವಲ್ಲ ಅದು ಚಿತ್ರಕಾರನ ಕನಸು. ಆತನ ಅನುಭವದ ಸಂವೇದನೆ, ಸಾಮಾಜಿಕ ಕಾಳಜಿಯ ಸಂಕೇತವಾಗಿದೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ, ಉದ್ಯಮಿ ಜಾರ್ಜ್ ಫರ್ನಾಂಡಿಸ್ ಹೇಳಿದರು. 
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ 15 ದಿನಗಳ ರಂಗ ಪರ್ಯಟನ ಎಂಬ ಚಿತ್ರ ಶಿಬಿರವನ್ನು ಪತ್ರಿಕಾ ಭವನದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 
ಬಣ್ಣಗಳಿಗೆ ಭಾಷೆಯಿಲ್ಲ. ಅದು ಶಬ್ದಗಳಿಗಿಂತ ಹೆಚ್ಚು ಪ್ರಭಾವವನ್ನು ಹೊಂದಿದೆ. ಎಲ್ಲರ ಮನ ತಟ್ಟುತ್ತದೆ. ಚಿತ್ರಗಳು, ಸಾವಿರ ಅರ್ಥಗಳನ್ನು ಹೇಳಬಲ್ಲ ಸಾಮರ್ಥ್ಯ ಹೊಂದಿದೆ. ಸಾಮಾಜಿಕ ಜಾಗೃತಿಗೆ ಇದು ಉತ್ತಮ ಮಾರ್ಗವಾಗಿದೆ ಎಂದರು. 
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟಾ÷್ಯನ್ಲಿ ಅಲ್ವಾರಿಸ್ ಮಾತನಾಡಿ, ಕೊಂಕಣಿ ಅತ್ಯಂತ ಪುರಾತನ ಭಾಷೆ. ದೇಶದಾದ್ಯಂತ ಸುಮಾರು 42 ಸಮುದಾಯಗಳು ಈ ಭಾಷೆಯನ್ನು ಮಾತನಾಡುತ್ತವೆ. ದೇಶದ ಪ್ರಮುಖ 6 ಲಿಪಿಯಲ್ಲಿ ಕೊಂಕಣಿಯನ್ನು ಬರೆಯಲಾಗುತ್ತದೆ. 
ಈ ಕೊಂಕಣಿ ಸಮುದಾಯಗಳ ಜೀವನಶೈಲಿ, ಆಹಾರ ಪದ್ಧತಿ, ಉಡುಗೆ ತೊಡುಗೆಗಳ ವಿಷಯವನ್ನಿಟ್ಟುಕೊಂಡು ಚಿತ್ರ ಕಲಾ ಶಿಬಿರ ಆಯೋಜಿಸಲಾಗುತ್ತಿದೆ. ಅಕಾಡೆಮಿಯಿಂದ ನೇಮಕವಾದ 6 ಕಲಾವಿದರು. 15 ದಿನ ವಿವಿಧ ಊರುಗಳಿಗೆ ತೆರಳಿ ಚಿತ್ರ ಬಿಡಿಸುವರು. ನಂತರ ಅದನ್ನು ಆಧರಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ಹೊರತರಲಾಗುವುದು ಎಂದರು. 
ಕಾರವಾರದಲ್ಲಿ 3, ಯಲ್ಲಾಪುರ, ಶಿರಸಿ, ಹೊನ್ನಾವರ, ಭಟ್ಕಳದಲ್ಲಿ ತಲಾ 2 ದಿನ ಶಿಬಿರ ಮಾಡಿ ಚಿತ್ರಗಳನ್ನು ಬಿಡಿಸಲಾಗುತ್ತದೆ. ಆಗಸ್ಟ್ 15 ರಂದು ಮಂಗಳೂರಿನಲ್ಲಿ ಶಿಬಿರ ಕೊನೆಗೊಳ್ಳಲಿದೆ ಎಂದು ವಿವರಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ವಸಂತ ಬಾಂದೇಕರ್, ಸುನೀಲ ಸಿದ್ದಿ, ಜೇಮ್ಸ್ ಪೇದ್ರು ರಂಗ ಪರ್ಯಟನೆಯ ಸಂಚಾಲಕ ವಿಲ್ಸನ್ ಡಿಸೋಜಾ ವೇದಿಕೆಯಲ್ಲಿದ್ದರು.