ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ
- ಕೊಂಕಣ ರೈಲ್ವೆ ಬಳಕೆದಾರರ ಸಮಿತಿಯ ಸದಸ್ಯರಾಗಿ ನೇಮಕವಾದ ಶಾಸಕ ಭೀಮಣ್ಣ ನಾಯ್ಕ
ಕೊಂಕಣ ರೈಲ್ವೆಯ ಮೂಲ ಸೌಕರ್ಯಗಳ ಬಗ್ಗೆ ಸಿಎಂ ಅವರ ಜೊತೆ ಮಾತುಕತೆ ಸಭೆ ಏರ್ಪಡಿಸುವುದಾಗಿ ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಭೀಮಣ್ಣ ನಾಯ್ಕ ಭರವಸೆ ನೀಡಿದರು.
ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರ ನೇತರ‍್ವದಲ್ಲಿ ಸದಸ್ಯರು ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ರೈಲ್ವೆ ಯೋಜನೆಯ ಸಮಸ್ಯೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಭೀಮಣ್ಣ ಈ ಬಗ್ಗೆ ಚರ್ಚೆ ನಡೆಸಿದರು. ಯೋಜನೆಗೆ ಕರ್ನಾಟಕ ಸರ್ಕಾರ ಶೇ. 17 ಪಾಲುದಾರನಾಗಿದೆ. ಹಾಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಮಂತ್ರಿಗಳ ಜೊತೆ ಸಭೆ ಏರ್ಪಡಿಸುವುದಾಗಿ ಹೇಳಿದರು.
ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕರ್ ಮಾತನಾಡಿ, ಕಾರವಾರದಲ್ಲಿ ರೈಲುಗಳಿಗೆ ನೀರು ತುಂಬಿಸುವ ಸೌಲಭ್ಯ ಒದಗಿಸುವಂತೆ ಕಳೆದ 18 ವರ್ಷಗಳಿಂದ ಮನವಿ ಮಾಡುತ್ತ ಬಂದರೂ ಪ್ರಯೋಜನವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ರೈಲು ನಿಲ್ದಾಣಗಳ ಫ್ಲಾಟ್‌ಫಾರ್ಮ್ಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಅವುಗಳನ್ನು ಉನ್ನತೀಕರಿಸುತ್ತಿಲ್ಲ. ಕೇರಳ ಭಾಗದ ರೈಲುಗಳು ಉತ್ತರ ಕನ್ನಡ ಜಿಲ್ಲೆಯ ಹಲವು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು. ಸಮಿತಿಯ ವೆಂಟು ಮಾಸ್ತರ ಶೀಳ್ಯ, ವಸಂತ್ ನಾಯಕ ಭಾವಿಕೇರಿ, ಚಂದ್ರಹಾಸ ಮುರಲಿ ನಾಯಕ ಗೋಕರ್ಣಇತರರು ಇದ್ದರು.