ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಮುಂಗಾರಿನ ಅವಗಢ ತಡೆಯಲು ಎಐ ಆಧಾರಿತ ವ್ಯವಸ್ಥೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಮುಂಗಾರಿನಲ್ಲಿ ಸಂಭವಿಸಬಹುದಾದ ಅವಗಢಗಳನ್ನು ತಡೆದು, ಸುರಕ್ಷಿತ, ತಡೆ ರಹಿತ ಸಂಚಾರಕ್ಕೆ ಕೊಂಕಣ ರೈಲ್ವೆ ಹಲವು ಕ್ರಮ ವಹಿಸಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ ಬಿ.ನಾರ್ಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯು ಭವ್ಯವಾದ ಪ್ರಕೃತಿ ಸೌಂದರ್ಯವನ್ನು ತರುತ್ತದೆಯಾದರೂ, ಈ ಭಾಗದ ಕಠಿಣ ಭೂಪ್ರದೇಶದಿಂದಾಗಿ ರೈಲು ಕಾರ್ಯಾಚರಣೆಗೆ ದೊಡ್ಡ ಸವಾಲುಗಳು ಎದುರಾಗುತ್ತವೆ. ಪ್ರಯಾಣಿಕರ ಸುರಕ್ಷತೆ ಮತ್ತು ತಡೆರಹಿತ ರೈಲು ಸಂಚಾರಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿರುವ ಕೊಂಕಣ ರೈಲ್ವೆಯು ವೇಳಾ ಪಟ್ಟಿ ಬದಲು ಮಾತ್ರವಲ್ಲದೇ ಸಾಕಷ್ಟು ತಯಾರಿ ನಡೆಸಿದೆ.
ರೈಲ್ವೆ ಹಳಿಗಳ ಮೇಲೆ ದಿನದ 24 ಗಂಟೆಯೂ ನಿಗಾ ಇಡಲು 657 ತರಬೇತಿ ಪಡೆದ ಸಿಬ್ಬಂದಿಯನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ.ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸಲು ಬಿಆರ್‌ಎನ್ ವ್ಯಾಗನ್ ಆಧಾರಿತ ಅಗೆಯುವ ಯಂತ್ರಗಳನ್ನು , ಕಾರವಾರ ಭಟ್ಕಳ ಸೇರಿ 9 ಕಡೆ ರೈಲು ನಿರ್ವಹಣಾ ವಾಹನ, ವಿವಿಧೆಡೆ ಟವರ್ ವ್ಯಾಗನ್‌ಗಳನ್ನು ನಿಯೋಜಿಸಲಾಗಿದೆ. ಕಲ್ಲು ಬೀಳದಂತೆ, ಮಣ್ಣು ಕುಸಿಯದಂತೆ, ನೀರು ತುಂಬುದನ್ನು ತಡೆಯಲು ತಜ್ಞರ ಅಭಿಪ್ರಾಯ ಪಡೆದು ಕ್ರಮ ವಹಿಸಲಾಗಿದೆ ಎಂದಿದ್ದಾರೆ.
40 ಕಿಮೀ ವೇಗ ಮಿತಿ
ದೃಷ್ಟಿಗೋಚರತೆ ಕಡಿಮೆಯಾದಾಗ ಗರಿಷ್ಠ 40 ಕಿಲೋಮೀಟರ್ ವೇಗದಲ್ಲಿ ಮಾತ್ರ ರೈಲು ಚಲಾಯಿಸಲು ಲೋಕೋ ಪೈಲಟ್‌ಗಳಿಗೆ ಸೂಚಿಸಲಾಗಿದೆ. ಹಳಿಗಳ ಮೇಲೆ 100 ಮಿಲಿಮೀಟರ್‌ಗಿಂತ ಹೆಚ್ಚು ನೀರು ನಿಂತರೆ ರೈಲನ್ನು ತಕ್ಷಣ ನಿಲ್ಲಿಸಬೇಕು ಮತ್ತು ನೀರು ಇಳಿದ ನಂತರವೇ ಸಂಚಾರ ಪುನರಾರಂಭಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. ವಿವಿಧೆಡೆ ಅಪಘಾತ ಪರಿಹಾರ ಉಪಕರಣಗಳನ್ನು ಇರಿಸಲಾಗಿದೆ.
ಆಧುನಿಕ ಸಂವಹನ ಮತ್ತು ತಂತ್ರಜ್ಞಾನ ವ್ಯವಸ್ಥೆ
ತುರ್ತು ಸಂವಹನಕ್ಕಾಗಿ ಸುರಕ್ಷತಾ ಸಿಬ್ಬಂದಿಗೆ ಮೊಬೈಲ್ ಫೋನ್‌ಗಳನ್ನು ನೀಡಲಾಗಿದ್ದು, ಲೋಕೋ ಪೈಲಟ್‌ಗಳು ಮತ್ತು ಟ್ರೈನ್ ಮ್ಯಾನೇಜರ್‌ಗಳಿಗೆ ವಾಕಿ-ಟಾಕಿಗಳನ್ನು ಒದಗಿಸಲಾಗಿದೆ. ಎಲ್ಲ ನಿಲ್ದಾಣಗಳಲ್ಲಿ 25-ವ್ಯಾಟ್ ವಿಹೆಚ್‌ಎಫ್ ಸೆಟ್‌ಗಳನ್ನು ಅಳವಡಿಸಲಾಗಿದೆ. ಪ್ರತಿ 1 ಕಿಲೋಮೀಟರ್ ಅಂತರದಲ್ಲಿ ಮತ್ತು 2 ಕಿಲೋಮೀಟರ್‌ಗಿಂತ ಉದ್ದವಿರುವ ಸುರಂಗಗಳಲ್ಲಿ ಪ್ರತಿ 400 ಮೀಟರ್‌ಗೆ ತುರ್ತು ಸಂವಹನ ಸಾಕೆಟ್‌ಗಳನ್ನು ಅಳವಡಿಸಲಾಗಿದೆ. ಅಪಘಾತ ಪರಿಹಾರ ವಾಹನಗಳಲ್ಲಿ ಸ್ಯಾಟಲೈಟ್ ಫೋನ್‌ಗಳ ವ್ಯವಸ್ಥೆಯೂ ಇದೆ. ವಿವಿಧ ನಿಲ್ದಾಣಗಳಲ್ಲಿ ಮಳೆ ದಾಖಲೀಕರಣ, ಬೃಹತ್ ನದಿಗಳಲ್ಲಿ ಪ್ರವಾಹ ಮುನ್ನೆಚ್ಚರಿಕೆ ಯಂತ್ರಗಳು, ಗಾಳಿ ಪ್ರಮಾಣ ಅಳೆಯುವ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.