ಗೋಕರ್ಣದ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಗುರುದೃಷ್ಟಿ ಭವನದಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯದ (Chaturmasya)ಎರಡನೇ ದಿನವಾದ ಗುರುವಾರ ಆಯೋಜಿಸಿದ್ದ ಭಿಕ್ಷಾಸೇವೆ ಧರ್ಮಸಭೆಯಲ್ಲಿ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಶ್ರೀ ಪರಿವಾರದ ವತಿಯಿಂದ ವೇ.ರಾಮಚಂದ್ರ ಭಟ್ಟ ದಂಪತಿ ಪೂರ್ಣಫಲ ಸಮರ್ಪಿಸಿದರು. ಶ್ರೀ ಶಿವ ಗುರುಕುಲಂ ಪ್ರಾಚಾರ್ಯ ಅಗ್ನಿಹೋತ್ರಿ ವಿದ್ವಾನ್ ಮಂಜುನಾಥ ಭಟ್ಟ, ಶ್ರೀಮಠದ ಶಾಸ್ತ್ರಿಗಳಾದ ವೇ. ಸುಬ್ರಾಯ ಶಾಸ್ತ್ರೀ, ಸಂಯೋಜಕ ರಾಘವೇಂದ್ರ ಮಧ್ಯಸ್ಥ, ಸುರೇಶ ಆಡುಗೋಡಿ, ಸಂತೋಷ ಹೆಗಡೆ, ಇತರರಿದ್ದರು.
- ರಾಘವೇಶ್ವರ ಶ್ರೀಗಳಿಂದ ‘ಅನ್ನಂ-ಬ್ರಹ್ಮ’ ಪ್ರವಚನ ಅನುಗ್ರಹ
- 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ
- ಚಾತುರ್ಮಾಸ್ಯ ಧರ್ಮಸಭೆ
ಗೋಕರ್ಣ: ಈ ಶರೀರ ಎನ್ನುವುದು ಪಾವನ ಕಾಶೀ ಕ್ಷೇತ್ರದಂತೆ. ಉತ್ತಮವಾದ ಧರ್ಮ ಸಾಧನೆಗೆ ಶರೀರವೇ ಆದ್ಯವಾದುದಾಗಿದೆ. ಇಂತಹ ಶರೀರಕ್ಕೆ ಆರೋಗ್ಯವೂ, ಆರೋಗ್ಯಕ್ಕೆ ನಾವು ಸೇವಿಸುವ ಆಹಾರವೂ ಪ್ರಧಾನವಾದುದಾಗಿದೆ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿಷ್ಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಶ್ರೀಮಠದ ಶ್ರೀ ಪರಿವಾರದ ವತಿಯಿಂದ ಗುರುವಾರ ಸಮರ್ಪಿತವಾದ ಭಿಕ್ಷಾಸೇವೆಯ ಧರ್ಮಸಭೆಯಲ್ಲಿ ಶ್ರೀಗಳು (Chaturmasya) ಚಾತುರ್ಮಾಸ್ಯ ನಿಮಿತ್ತದ ಅನ್ನಂ-ಬ್ರಹ್ಮ ಪ್ರವಚನ ಮಾಲಿಕೆಯಲ್ಲಿ ಸರ್ವರನ್ನು ಆಶೀರ್ವದಿಸಿದರು.
ಕವಿರತ್ನ ಕಾಳಿದಾಸ ‘ಶರೀರಮಾದ್ಯಂ ಖಲು ಧರ್ಮ ಸಾಧನಂ’ ಎಂದು ತಿಳಿಸಿದರೆ, ಶ್ರೀ ಆದಿಶಂಕರ ಭಗವತ್ಪಾದರು ‘ಕಾಶೀಕ್ಷೇತ್ರಂ ಶರೀರಂ ಖಲು ಧರ್ಮ ಸಾಧನಂ’ ಎಂದು ತಿಳಿಸಿದ್ದಾರೆ.
ಧರ್ಮ ಸಾಧನೆಗೆ ಶರೀರ ಮತ್ತು ಶರೀರದ ಆರೋಗ್ಯ ಮುಖ್ಯವಾದುದು. ಆರೋಗ್ಯ ಕೆಡಿಸಿಕೊಂಡರೆ ದುಡಿಯಲು ಬಾರದು. ಗಳಿಕೆ ಇಲ್ಲದು. ಸುಖ ದೊರೆಯದು. ರೋಗಗ್ರಸ್ತವಾಗಿ ದೇಹ ದುಃಖ ಪೀಡಿತವಾಗುವುದು ಎಂದು ತಿಳಿಸಿದರು.
ಶ್ರೀ ಶಂಕರ ಗುರುವರ್ಯರು ಶರೀರ ಎಂಬ ಕಾಶೀಕ್ಷೇತ್ರದಲ್ಲಿ ಬುದ್ಧಿ, ಜ್ಞಾನ ಎಂಬ ಪವಿತ್ರ ಗಂಗೆ ಇದೆ.
ಹೃದಯ ಸ್ಥಿತವಾದ ಆತ್ಮವೇ ವಿಶ್ವೇಶ ರೂಪ. ಕಾರಣ ಈ ಶರೀರ ಒಡೆದು ಹೋಗುವ ಮುನ್ನ ಕಾರ್ಯ ಸಾಧನೆಯಾಗಲಿ.
‘ಯತ್ ಪಿಂಡೇ ತತ್ ಬ್ರಹ್ಮಾಂಡೇ’. ಬ್ರಹ್ಮಾಂಡದ ಚರಾಚರ ಸೃಷ್ಟಿಯೇ ಶರೀರದ ಒಳಗಿದೆ. ಕಾರಣ ಶರೀರವೆಂಬ ವಾಹನ ಬಿಟ್ಟಿಯಾಗಿ ಬಂದುದಲ್ಲ. ಪುಣ್ಯದ ಬೆಲೆ ತೆತ್ತು ಬಂದುದಾಗಿದ್ದೂ ಇದನ್ನು ಕೆಡಿಸುವ ಕಾರ್ಯಕ್ಕೆ ಮುಂದಾಗದಿರಿ ಎಂದು ಸಾರಿರುವರು ಎಂದು ಶ್ರೀಗಳು ವಿವರಿಸಿದರು.
ಅನ್ನ ಸೂತ್ರ
ಸಾಧನೆಗೆ ಮೂಲವಾದ ಆರೋಗ್ಯಕ್ಕೆ ಶರೀರ ಸೇವಿಸುವ ಅನ್ನಾಹಾರವೇ ಮೂಲ. ಇಂತಹ ಅನ್ನ ಸೂತ್ರವನ್ನು ಆಯುರ್ವೇದ ಶಾಸ್ತ್ರದ ಮೂಲಕ ಮಹರ್ಷಿ ಧನ್ವಂತರಿಗಳು, ಮಹರ್ಷಿ ವಾಗ್ಭಟರು, ಚರಕ ಮಹರ್ಷಿಗಳಂತಹ ಅನೇಕ ಆರೋಗ್ಯ ಶಾಸ್ತ್ರ ದೃಷ್ಟಾರರು ವಿಷದೀಕರಿಸಿದ್ದಾರೆ.
ಪಕ್ಷಿರೂಪಿಯಾಗಿ ಆಗಮಿಸಿದ ಧನ್ವಂತರಿ ಅವರಿಗೆ ವಾಗ್ಭಟರು ಹಿತಭುಕ್, ಮಿತಭುಕ್ ಮತ್ತು ಋತು ಅಥವಾ ಅಶಾಕಭುಕ್ ಎಂಬ ಮೂರೇ ಮೂರು ಶಬ್ದಗಳಿಂದ ಸಮಗ್ರ ಅನ್ನಸೂತ್ರವನ್ನು ಪ್ರದಾನ ಮಾಡಿದರು.
ಹಿತವಾದುದನ್ನು ಅಂದರೆ ಸೇವಿಸಲು ಉತ್ತಮವಾದುದನ್ನು. ಮಿತವಾಗಿ ಅಂದರೆ ಎಷ್ಟು ಬೇಕೋ ಅಷ್ಟು ಮಾತ್ರ ತೂಗಿ ಅಳೆದು. ಸಕಾಲದಲ್ಲಿ ಮತ್ತು ಅನಗತ್ಯವಾದ ಶಾಕ (ಸೊಪ್ಪು-ತರಕಾರಿ) ವಸ್ತುಗಳನ್ನು ವರ್ಜಿಸಿ ತಿನ್ನು ಎನ್ನುವ ಸೂತ್ರವನ್ನು ಆರೋಗ್ಯ ಲೋಕದ ಬೆಳಕು ಎಂದು ಪ್ರಣೀತರಾದ ವಾಗ್ಭಟರು ಆಯುರ್ವೇದಕ್ಕೆ ಒದಗಿಸಿದರು.
ಹಿತ, ಮಿತ ಮತ್ತು ಅಕಾಲ ಸೇವನೆ ಅಜೀರ್ಣಕ್ಕೆ ದಾರಿಯಾಗಿದೆ. ‘ಅಜೀರ್ಣೇ ಭೋಜನಂ ವಿಷಂ’. ಅಜೀರ್ಣವಾದ ಭೋಜನ ವಿಷಕಾರಕವಾಗಿ ರೋಗ ಮೂಲವಾಗುತ್ತದೆ. ಕಾರಣ ಶರೀರ ಮತ್ತು ಆರೋಗ್ಯದ ಸದೃಢಕ್ಕೆ ಇಂತಹ ಅನ್ನ ಸೂತ್ರವನ್ನು ಅನುಸರಿಸುವ ಕಾರ್ಯಕ್ಕೆ ಮುಂದಾಗಿ ಎಂದು ಶ್ರೀಗಳು ಆಶೀರ್ವಚನವಿತ್ತರು.
ಶ್ರೀ ಪರಿವಾರ
ಇದೇ ವೇಳೆ ಗುರುವಾರ ಶ್ರೀ ಪರಿವಾರದ ವತಿಯಿಂದ ಸಮರ್ಪಿತವಾದ ಭಿಕ್ಷಾಸೇವೆಯ ಸಂಬಂಧ ಶ್ರೀಗಳು ನುಡಿಯುತ್ತ ಆತ್ಮಕ್ಕೆ ದೇಹ, ಇಂದ್ರಿಯ ಮತ್ತು ಮನಸು ಪರಿವಾರ. ದೇಹಕ್ಕೆ ಆಹಾರ, ವಿಹಾರ, ನಿದ್ರೆ ಇತ್ಯಾದಿಗಳು ಪರಿವಾರ.
ಇಂತಹದೇ ಅವಿನಾಬಂಧ ಗುರು ಮತ್ತು ಪರಿವಾರದ ಮಧ್ಯೆ ಹಾಗೂ ಪರಿವಾರ ಮತ್ತು ಸಮಾಜದ ನಡುವಿನದಾಗಿದೆ. ಹೀಗೆ ಶ್ರೀಮಠದ ಶ್ರೀ ಪರಿವಾರದ ಅನುನಯ ಅನುಬಂಧಗಳನ್ನು ಸ್ಮರಿಸಿ ಶ್ರೀಗಳು ಆಶೀರ್ವಚನವಿತ್ತರು.
ಶ್ರೀ ಪರಿವಾರದ ಪರವಾಗಿ ವೇ.ರಾಮಚಂದ್ರ ಭಟ್ಟ ದಂಪತಿ ಶ್ರೀಗಳಿಗೆ ಪೂರ್ಣಫಲ ಸಮರ್ಪಿಸಿದರು.
ಶ್ರೀಮಠದ ಶಾಸ್ತ್ರಿಗಳಾದ ವೇ. ಸುಬ್ರಾಯ ಭಟ್ಟ, ಶ್ರೀ ಶಿವ ಗುರುಕುಲಂ ಪ್ರಾಚಾರ್ಯ, ಅಗ್ನಿಹೋತ್ರಿ ವಿದ್ವಾನ್ ಮಂಜುನಾಥ ಭಟ್ಟ, ಶ್ರೀ ಚರಣ ವಿಭಾಗ ಶ್ರೀ ಸಂಯೋಜಕ ರಾಘವೇಂದ್ರ ಮಧ್ಯಸ್ಥ, ಶ್ರೀಗಳ ಆಪ್ತ ಕಾರ್ಯದರ್ಶಿ ಸುರೇಶ ಆಡುಗೋಡಿ, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಮಧು ಜಿ.ಕೆ., ದಿನೇಶ ಹೆಗಡೆ, ಆಚಾರ, ವಿಚಾರ ವೇ. ಗಜಾನನ ಭಟ್ಟ, ರಮೇಶ ವಿಭೂತಿಮನೆ, ದಿನ ಪ್ರಧಾನ ಪ್ರಕಾಶ ಹೆಗಡೆ ದಂಪತಿ, ಶಿಕ್ಷಣ ತಜ್ಞ ಡಾ.ಜಿ.ಜಿ. ಹೆಗಡೆ, ಉದ್ಯಮಿ ಶಶಾಂಕ ಹೆಗಡೆ ಕವಲಕ್ಕಿ ಇತರರಿದ್ದರು.